ಕ್ರೀಡೆ

ಭಾರತ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಬಹಿಷ್ಕರಿಸಿದರೆ ಏನಾಗುತ್ತೆ ಗೊತ್ತಾ…?

Pinterest LinkedIn Tumblr

ಮುಂಬೈ: ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಎಲ್ಲೆಡೆ ವಿಶ್ವಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಒಂದು ವೇಳೆ ಭಾರತ ತಂಡ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಿದರೆ ಏನಾಗುತ್ತದೆ ಗೊತ್ತಾ..?

ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಇದು ಇಂಡೋ-ಪಾಕ್ ಕ್ರಿಕೆಟ್ ಮೇಲೂ ಗಂಭೀರ ಪರಿಣಾಮ ಬೀರಿದೆ. ಈಗಾಗಲೇ ಭಾರತೀಯ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರು ಭಾರತ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೇವಲ ಕ್ರಿಕೆಟಿಗರಿಂದ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಿಂದಲೂ ಇದೇ ಆಗ್ರಹ ಕೇಳಿಬರುತ್ತಿದೆ.

ಆದರೆ ಒಂದು ವೇಳೆ ಭಾರತ ತಂಡ ಪಾಕಿಸ್ತಾನದ ವಿರುದ್ಧದ ತನ್ನ ಪಂದ್ಯಗಳನ್ನು ಬಹಿಷ್ಕರಿಸಿದರೆ ಅದು ಪಾಕಿಸ್ತಾನಕ್ಕೆ ವರದನವಾಗಲಿದೆ. ಹೌದು.. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಂಬರುವ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಹೈವೋಲ್ಟೇಜ್ ಟೂರ್ನಿಗೆ ಸಿದ್ಧತೆ ಕೂಡ ಆರಂಭವಾಗಿದೆ. ಈ ಹೊತ್ತಿನಲ್ಲಿ ವೇಳಾಪಟ್ಟಿ ಬದಲಾವಣೆ ಕಷ್ಟಸಾಧ್ಯ. ಇದೇ ಕಾರಣಕ್ಕೆ ಭಾರತೀಯರು ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಇಂತಹ ಕಠಿಣ ನಿರ್ಧಾರದಿಂದ ಪಾಕಿಸ್ತಾನಕ್ಕೇ ಅದು ವರದಾನವಾಗಲಿದೆ.

ಹೌದು.. ಐಸಿಸಿಯ ನಿಯಮಾವಳಿಗಳಂತೆ ನಿಗದಿತ ವೇಳಾಪಟ್ಟಿಯಲ್ಲಿರುವಂತೆ ಯಾವುದೇ ಒಂದು ತಂಡ ತನ್ನ ಎದುರಾಳಿ ತಂಡದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಆಗ ಎದುರಾಳಿ ತಂಡ ಗೆದ್ದಿದೆ ಎಂದು ಭಾವಿಸಿ ಆ ತಂಡಕ್ಕೇ ಸಂಪೂರ್ಣ ಅಂಕಗಳು ಲಭಿಸುತ್ತದೆ. ಉದಾಹರಣೆಗೆ ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಆಗ ಪಾಕಿಸ್ತಾನ ಭಾರತದ ವಿರುದ್ದ ಗೆದ್ದಿದೆ ಎಂದು ಪಾಕ್ ತಂಡಕ್ಕೆ ಸಂಪೂರ್ಣ ಅಂಕಗಳು ಹೋಗುತ್ತದೆ. ಈ ನಿಯಮ ವಿಶ್ವಕಪ್ ಲೀಗ್ ಪಂದ್ಯಗಳಿಗೆ ಮಾತ್ರವಲ್ಲ ಫೈನಲ್ ಪಂದ್ಯಕ್ಕೂ ಅನ್ವಯವಾಗಲಿದ್ದು, ಒಂದು ವೇಳೆ ಫೈನಲ್ ನಲ್ಲಿ ಭಾರತ-ಪಾಕ್ ಪರಸ್ಪರ ಎದುರಾಗಿ ಭಾರತ ಪಂದ್ಯವನ್ನು ಬಹಿಷ್ಕರಿಸಿದರೆ ಆಗ ಪಾಕಿಸ್ತಾನವನ್ನೇ ವಿಜೇತ ತಂಡವೆಂದು ಘೋಷಿಸಲಾಗುತ್ತದೆ. ಇದೇ ಕಾರಣಕ್ಕೆ ಬಿಸಿಸಿಐ ಪಾಕಿಸ್ತಾನದ ವಿರುದ್ಧ ಪಂದ್ಯದ ಬಹಿಷ್ಕಾರಕ್ಕೆ ಹಿಂದೇಟು ಹಾಕುತ್ತಿದ್ದು, ಕೇಂದ್ರ ಸರ್ಕಾರದ ನಿರ್ಣಯಕ್ಕೆ ಕಾಯುತ್ತಿದೆ.

ಅಂತೆಯೇ ವಿಶ್ವ ಕ್ರಿಕೆಟ್ ನಲ್ಲಿ ಭಾರತ ತಂಡ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಭಾರತ ತಂಡವಿಲ್ಲದ ವಿಶ್ವಕಪ್ ಟೂರ್ನಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿರಲಿದ್ದು, ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿರುತ್ತದೆ. ವಿಶ್ವದ ಯಾವುದೇ ತಂಡಗಳಿಗೂ ಇಲ್ಲದ ಅಭಿಮಾನಿಗಳ ದಂಡು ಈ ಎರಡು ತಂಡಗಳಿಗಿವೆ. ಇದೇ ಕಾರಣಕ್ಕೆ ಸಾಕಷ್ಟು ಬಾರಿ ಐಸಿಸಿ ಇದನ್ನು ತನ್ನ ಲಾಭಕ್ಕೆ ಬಳಕೆ ಮಾಡಿಕೊಂಡು ತನ್ನ ಟೂರ್ನಿಯ ಪ್ರಚಾರ ಹೆಚ್ಚಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಐಸಿಸಿ ಭಾರತ-ಪಾಕ್ ನಡುವಿನ ಪಂದ್ಯವನ್ನು ನಡೆಯದಂತೆ ತಡೆಯುವುದು ಅಸಾಧ್ಯ.

ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಅಜೇಯ ದಾಖಲೆ ಹೊಂದಿದ್ದು, ಈಗ ಭಾರತ ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸಿದರೆ ಈ ದಾಖಲೆ ಅಳಿಯಲಿದೆ. ಈ ನಿಟ್ಟಿನಲ್ಲೂ ಭಾರತಕ್ಕೆ ಪಾಕ್ ವಿರುದ್ದದ ಪಂದ್ಯ ಮುಖ್ಯವಾಗಿರಲಿದೆ. ಒಂದು ವೇಳೆ ಹಾಗೆ ಆದರೂ ವಿಶ್ವಕಪ್ ಟೂರ್ನಿ ಕಳೆಗುಂದಲಿದ್ದು, ಇಂತಹ ಸಾಹಸಕ್ಕೆ ಐಸಿಸಿ ಮುಂದಾಗುವುದಿಲ್ಲ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

Comments are closed.