ಕ್ರೀಡೆ

ರಶೀದ್‌ ಖಾನ್ ಆಲ್‌ರೌಂಡ್‌ ಆಟಕ್ಕೆ ಸೋತು ಶರಣಾದ ಕೆಕೆಆರ್ ! ಫೈನಲ್ ಗೆ ಲಗ್ಗೆ ಇಟ್ಟ ಹೈದರಾಬಾದ್

Pinterest LinkedIn Tumblr

ಕೋಲ್ಕತ್ತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ-20 ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ಕೋಲ್ಕತಾ ನೈಟ್‌ ರೈಡರ್ಸ್‌ ಸೋಲನುಭವಿಸಿದೆ. ಇದರೊಂದಿಗೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಪ್ರಸಕ್ತ ಸಾಲಿನ ಐಪಿಎಲ್‌ ಪಂದ್ಯಾವಳಿಯ ಫೈನಲ್‌ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿದೆ.

ರಶೀದ್​ ಖಾನ್​ ಅವರ ಆಲ್ ರೌಂಡ್ ಆಟದ ನೆರವಿನಿಂದ ಹೈದರಾಬಾದ್ ಗೆ ಜಯ ದೊರಕಿದೆ.
ಟಾಸ್​ ಸೋತು ಇನಿಂಗ್ಸ್​ ಆರಂಭಿಸಿದ ಹೈದರಾಬಾದ್ ಶಿಖರ್​ ಧವನ್​ (34) ಮತ್ತು ವೃದ್ಧಿಮಾನ್​ ಸಾಹಾ (35) ರಶೀದ್​ ಖಾನ್​ ( 10 ಎಸೆತಗಳಲ್ಲಿ 34 ರನ್​) ನೆರವಿನೊಡನೆ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 174 ರನ್​ ಪೇರಿಸಿತು.

ಕೋಲತ್ತಾ ಪರವಾಗಿ ಕುಲದೀಪ್ ಯಾದವ್ 2, ಶಿವಂ ಮಾವಿ, ಸುನಿಲ್ ನರೈನ್, ಪಿಯುಶ್ ಚಾವ್ಲಾ ತಲಾ 1 ವಿಕೆಟ್ ಕಿತ್ತರು.

ಸವಾಲಿನ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 161 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಕೋಲ್ಕತ ಪರ ಆರಂಭಿಕ ಆಟಗಾರರಾದ ಕ್ರಿಸ್​ ಲ್ಯಾನ್​ 48 ಮತ್ತು ಸುನಿಲ್​ ನರೈನ್ 26 ನಿತಿನ್​ ರಾಣಾ 22 ಮತ್ತು ಶುಭಮಾನ್​ ಗಿಲ್​ 30 ರನ್ ಗಳಿಸಿದರು. ಇನ್ನು ನಾಯಕ ದಿನೇಶ್ ಕಾರ್ತಿಕ್ ಸೇರಿ ಉಳಿದ ಆಟಗಾರರು ಉತ್ತಮ ರನ್ ಕಲೆಹಾಕುವಲ್ಲಿ ವಿಫಲರಾದರು.

ರಶೀದ್ ಖಾನ್‌ ಬ್ಯಾಟಿಂಗ್ ಸೊಗಸು: ಶಕೀಬ್ ಅಲ್‌ ಹಸನ್ ಮತ್ತು ದೀಪಕ್ ಹೂಡ ಸೊಗಸಾದ ಬ್ಯಾಟಿಂಗ್ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ನಾಲ್ಕನೇ ವಿಕೆಟ್‌ಗೆ ಅವರು 39 ರನ್‌ ಸೇರಿಸಿದರು. ಆದರೆ ಶಕೀಬ್ ಅವರನ್ನು ರನ್‌ ಔಟ್ ಮಾಡಿದ ಕುಲದೀಪ್‌ ಯಾದವ್‌ ತಿರುಗೇಟು ನೀಡಿದರು. ಇದರ ಬೆನ್ನಲ್ಲೇ ದೀಪಕ್ ಹೂಡ ಸ್ಪಿನ್ನರ್‌ ಸುನಿಲ್ ನಾರಾಯಣ್‌ಗೆ ವಿಕೆಟ್ ಒಪ್ಪಿಸಿದರು.ಯೂಸುಫ್ ಪಠಾಣ್ ಮತ್ತು ಕಾರ್ಲೋಸ್ ಬ್ರಾಥ್‌ವೇಟ್ ಔಟಾದ ನಂತರ ರಶೀದ್ ಖಾನ್‌ 10 ಎಸೆತಗಳಲ್ಲಿ 34 ರನ್ ಗಳಿಸಿ ರಂಜಿಸಿದರು. ಅವರು ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿ ಗಳಿಸಿದ್ದರು.

ಹೈದರಾಬಾದ್ ಪರವಾಗಿ ರಶೀದ್​ ಖಾನ್ 3, ಬ್ರಾಥ್​ ವೇಟ್2 ಮತ್ತು ಸಿದ್ಧಾರ್ಥ್​ ಕೌಲ್ ವಿಕೆಟ್​ ಪಡೆದು ಮಿಂಚಿದರು.

ಭಾನುವಾರ ಮುಂಬೈನಲ್ಲಿ ನಡೆವ ಫೈನಲ್ಸ್ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಇದಾಗಲೇ ಫೈನಲ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ನ್ನು ಎದುರಿಸಲಿದೆ.

Comments are closed.