ಕ್ರೀಡೆ

ಏಕದಿನ, ಟಿ–20 ನಾಯಕತ್ವಕ್ಕೆ ವಿದಾಯ ಹೇಳಿದ ಧೋನಿ

Pinterest LinkedIn Tumblr

dhoni

ನವದೆಹಲಿ: ಮಹೇಂದ್ರ ಸಿಂಗ್ ದೋನಿ ಅವರು ಭಾರತ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆದರೆ, 35 ವರ್ಷ ವಯಸ್ಸಿನ ದೋನಿ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಆಗಿ ಮುಂದುವರಿಯಲಿದ್ದಾರೆ. ಬುಧವಾರ ಅವರು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್ ಅವರಿಗೆ ತಮ್ಮ ನಿರ್ಧಾರ ಹೇಳಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಜನವರಿ15ರಿಂದ ಇಂಗ್ಲೆಂಡ್ ಎದುರು ಆರಂಭವಾಗಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಭಾರತ ತಂಡದ ಆಯ್ಕೆಯು ಶುಕ್ರವಾರ ನಡೆಯಲಿದೆ. ಆದರೆ, ಅದಕ್ಕೂ ಮುನ್ನವೇ ದೋನಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಅತ್ಯಂತ ಯಶಸ್ವಿ ನಾಯಕರಲ್ಲಿ ದೋನಿ ಒಬ್ಬರಾಗಿದ್ದಾರೆ. ಅವರ ನೇತೃತ್ವದಲ್ಲಿ ತಂಡವು 2007ರ ಟ್ವೆಂಟಿ–20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. 2014ರ ಡಿಸೆಂಬರ್‌ನಲ್ಲಿ ದೋನಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ದೋನಿ ನಿರ್ಧಾರದಿಂದಾಗಿ ಮುಂದಿನ ಸರಣಿಯಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸುವ ಸಾಧ್ಯತೆಯಿದೆ.

ದೋನಿ ಅವರು ಒಟ್ಟು 283 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 9110 ರನ್‌ಗಳನ್ನು ಪೇರಿಸಿದ್ದಾರೆ. ಅದರಲ್ಲಿ 9 ಶತಕಗಳು ಮತ್ತು 61 ಅರ್ಧಶತಕಗಳು ಸೇರಿವೆ. ವಿಕೆಟ್‌ ಕೀಪಿಂಗ್‌ನಲ್ಲಿ ಅವರು 267 ಕ್ಯಾಚ್ ಪಡೆದಿದ್ದಾರೆ ಮತ್ತು 92 ಸ್ಟಂಪಿಂಗ್ ಮಾಡಿದ್ದಾರೆ. 73 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿರುವ ಅವರು 1112 ರನ್‌ಗಳನ್ನು ಸೇರಿಸಿದ್ದಾರೆ.

Comments are closed.