ಕ್ರೀಡೆ

ಭಾರತಕ್ಕೆ ಸತತ ನಾಲ್ಕನೆ ಜಯ: ರೋಹಿತ್ ರನ್ ಮಳೆಗೆ ಕೊಚ್ಚಿಹೋದ ಸಿಂಹಳೀಯರು

Pinterest LinkedIn Tumblr

kulkarni

ಕೋಲ್ಕತಾ, ನ.13: ರೋಹಿತ್ ಶರ್ಮ ದಾಖಲಿಸಿದ ವಿಶ್ವದಾಖಲೆಯ ದ್ವಿಶತಕದ ನೆರವಿನಲ್ಲಿ ಟೀಮ್ ಇಂಡಿಯಾ ಇಲ್ಲಿ ನಡೆದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ 153 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಗೆಲುವಿಗೆ 405 ರನ್‌ಗಳ ಕಠಿಣ ಸವಾಲನ್ನು ಪಡೆದ ಶ್ರೀಲಂಕಾ ತಂಡ 43.1 ಓವರ್‌ಗಳಲ್ಲಿ 251 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು. ಈಗಾಗಲೇ ಸರಣಿ ಕಳೆದುಕೊಂಡಿರುವ ಲಂಕಾ ಐದು ಪಂದ್ಯಗಳ ಸರಣಿಯಲ್ಲಿ ಸತತ ನಾಲ್ಕನೆ ಪಂದ್ಯವನ್ನು ಕಳೆದುಕೊಂಡಿತು.
ಶ್ರೀಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ (75),ಲಹಿರಿ ತಿರಿಮನ್ನೆ (59),ತಿಸ್ಸರಾ ಪೆರೆರಾ(29), ತಿಲಕರತ್ನೆ ದಿಲ್ಶನ್(34) , ಎಸ್ ಪ್ರಸನ್ನ(11) ಎರಡಂಕೆಯ ಸ್ಕೋರ್ ದಾಖಲಿಸಿ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.
ಭಾರತದ ಧವಳ್ ಕುಲಕರ್ಣಿ (4-34), ಉಮೇಶ್ ಯಾದವ್(2-38), ಸ್ಟುವರ್ಟ್ ಬಿನ್ನಿ(2-55), ಅಕ್ಷರ್ ಪಟೇಲ್ (2-51)ದಾಳಿಗೆ ಸಿಲುಕಿದ ಶ್ರೀಲಂಕಾ ತಂಡ 9.4 ಓವರ್‌ಗಳಲ್ಲಿ 48 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಐದನೆ ವಿಕೆಟ್‌ಗೆ ನಾಯಕ ಮಾಥ್ಯೂಸ್ ಮತ್ತು ತಿರಿಮನ್ನೆ 19.1 ಓವರ್‌ಗಳಲ್ಲಿ 6.15 ಸರಾಸರಿಯಂತೆ 118 ರನ್ ಸೇರಿಸಿ ಸ್ಕೋರ್‌ನ್ನು 28.5 ಓವರ್‌ಗಳಲ್ಲಿ 166ಕ್ಕೆ ತಲುಪಿಸಿದ್ದರು. ಮ್ಯಾಥ್ಯೂಸ್ 75 ರನ್(68ಎ, 9ಬೌ, 1ಸಿ) ಗಳಿಸಿ ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಆರನೆ ವಿಕೆಟ್‌ಗೆ ತಿರಿಮನ್ನೆ ಮತ್ತು ತಿಸ್ಸರ ಪೆರೆರಾ 52 ರನ್ ಸೇರಿಸಿದರು. ತಿರಿಮನ್ನೆ ಔಟಾದ ಬಳಿಕ ಲಂಕಾ ಒತ್ತಡಕ್ಕೆ ಸಿಲುಕಿ ಮತ್ತೆ 33 ರನ್ ಜಮೆಯಾಗುವಷ್ಟರಲ್ಲಿ ಆಲೌಟಾಯಿತು.
ಭಾರತ 404/5:ರೋಹಿತ್ ಶರ್ಮರ ವಿಶ್ವದಾಖಲೆಯ ದ್ವಿಶತಕ ಮತ್ತು ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಲ್ಲಿ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 404 ರನ್ ಸಂಪಾದಿಸಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ 13 ಓವರ್‌ಗಳಲ್ಲಿ 59 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿತ್ತು. ಅಜಿಂಕ್ಯ ರಹಾನೆ 28 ರನ್ ಗಳಿಸಿದ್ದಾಗ ಅವರನ್ನು ಆ್ಯಂಜೆಲೊ ಮ್ಯಾಥ್ಯೂಸ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಅಂಬಟಿ ರಾಯುಡು (8) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದೆ ಎರಂಗ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
13 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 59 ರನ್ ಗಳಿಸಿ ಒತ್ತಡಕ್ಕೆ ಸಿಲುಕಿದ್ದ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಲಂಕಾದ ಬೌಲರ್‌ಗಳ ಬೆವರಿಳಿಸಿದರು.
ರೋಹಿತ್ ಶರ್ಮ ಮತ್ತು ಕೊಹ್ಲಿ ಮೂರನೆ ವಿಕೆಟ್‌ಜೊತೆಯಾಟದಲ್ಲಿ 25.5 ಓವರ್‌ಗಳಲ್ಲಿ 7.81 ಸರಾಸರಿಯಂತೆ 202 ರನ್ ಸೇರಿಸಿದರು.
ರೋಹಿತ್ ಶರ್ಮ ಶತಕ ತಲುಪಿದ ಬಳಿಕ ಕೊಹ್ಲಿ ಶತಕದ ಭರವಸೆ ಮೂಡಿಸಿದ್ದರು. ಆದರೆ 38.5ನೆ ಓವರ್‌ನಲ್ಲಿ ಕೊಹ್ಲಿ ಅನಗತ್ಯವಾಗಿ ರನ್ ಕದಿಯಲು ಹೋಗಿ ರನೌಟಾದರು. 64 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 66 ರನ್ ಗಳಿಸಿ ಕೊಹ್ಲಿ ನಿರ್ಗಮಿಸಿದರು.
ಕೊಹ್ಲಿ ನಿರ್ಗಮನದ ಬಳಿಕ ಕ್ರೀಸ್‌ಗೆ ಆಗಮಿಸಿದ ಸುರೇಶ್ ರೈನಾ 5 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಇರುವ 11 ರನ್ ಸೇರಿಸಿ ಪೆವಿಲಿಯನ್‌ಗೆ ವಾಪಸಾದರು. ಆಗ ತಂಡದ ಸ್ಕೋರ್ 40.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 276 ಆಗಿತ್ತು.
128 ರನ್‌ಗಳ ಜೊತೆಯಾಟ: ಐದನೆ ವಿಕೆಟ್‌ಗೆ ರೋಹಿತ್ ಶರ್ಮಗೆ ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಜೊತೆಯಾದರು. ಉತ್ತಪ್ಪ ಅವರು ರೋಹಿತ್‌ಗೆ ಉತ್ತಮ ಬೆಂಬಲ ನೀಡಿದರು.
ಶರ್ಮ ಮತ್ತು ಉತ್ತಪ್ಪ ಜೊತೆಯಾಟದಲ್ಲಿ ಭಾರತದ ಖಾತೆಗೆ 9.4 ಓವರ್‌ಗಳಲ್ಲಿ 13.24 ಸರಾಸರಿಯಂತೆ 128 ರನ್ ಸೇರ್ಪಡೆಗೊಂಡಿತು.ಉತ್ತಪ್ಪ 16 ರನ್(16ಎ, 1ಬೌ) ಗಳಿಸಿ ಔಟಾಗದೆ ಉಳಿದರು.
ಸ್ಕೋರ್ ವಿವರ
ಭಾರತ: 50 ಓವರ್‌ಗಳಲ್ಲಿ 404/5
ಅಜಿಂಕ್ಯ ರಹಾನೆ ಎಲ್‌ಬಿಡಬ್ಲೂ ಮ್ಯಾಥ್ಯೂಸ್ 28, ರೋಹಿತ್ ಶರ್ಮ ಸಿ ಜಯವರ್ಧನೆ ಬಿ ಕುಲಸೇಕರ 264, ರಾಯುಡು ಬಿ ಎರಂಗ 8, ವಿರಾಟ್ ಕೊಹ್ಲಿ ರನೌಟ್ 66, ಸುರೇಶ್ ರೈನಾ ಸಿ ಜಯವರ್ಧನೆ ಬಿ ಮ್ಯಾಥ್ಯೂಸ್ 11, ರಾಬಿನ್ ಉತ್ತಪ್ಪ ಅಜೇಯ 16, ಇತರ 11
ವಿಕೆಟ್ ಪತನ: 1-40, 2-59, 3-261, 4-276, 5-404
ಬೌಲಿಂಗ್: ಕುಲಸೇಕರ 9-0-89-1, ಮ್ಯಾಥ್ಯೂಸ್ 8-1-44-2, ಎರಂಗ 10-0-77-1, ಪೆರೇರಾ 5-0-43-0, ಪ್ರಸನ್ನ 10-0-70-0, ಮೆಂಡಿಸ್ 7-0-70-0, ದಿಲ್ಶನ್ 1-0-11-0.
ಶ್ರೀಲಂಕಾ: 43.1 ಓವರ್‌ಗಳಲ್ಲಿ 251/9

ಪೆರೆರಾ ಸಿ ಕರಣ್ ಶರ್ಮ ಬಿ ಯಾದವ್ 0, ದಿಲ್ಶನ್ ಸಿ ರೈನಾ ಬಿ ಬಿನ್ನಿ 34, ಚಾಂಡಿಮಲ್ ಸಿ ರೈನಾ ಬಿ ಬಿನ್ನಿ 9, ಜಯವರ್ಧನೆ ಎಲ್‌ಬಿಡಬ್ಲೂ ಯಾದವ್ 2, ಮ್ಯಾಥ್ಯೂಸ್ ಸ್ಟಂ. ಉತ್ತಪ್ಪ ಬಿ ಪಟೇಲ್ 75, ತಿರಿಮನ್ನೆ ಸಿ ಕೊಹ್ಲಿ ಬಿ ಕುಲಕರ್ಣಿ 59, ಪೆರೆರ ಸಿ ಉತ್ತಪ್ಪ ಬಿ ಕುಲಕರ್ಣಿ 29, ಪ್ರಸನ್ನ ಸಿ ಪಟೇಲ್ ಬಿ ಕುಲಕರ್ಣಿ 11, ಕುಲಸೇಖರ ಸಿ ರಾಯುಡು ಬಿ ಕುಲಕರ್ಣಿ 0, ಮೆಂಡಿಸ್ ಸಿ ಕರಣ್ ಶರ್ಮ ಬಿ ಪಟೇಲ್ 4, ಎರಂಗ ಅಜೇಯ 12, ಇತರ 16
ವಿಕೆಟ್ ಪತನ: 1-0, 2-31, 3-42, 4-48, 5-166, 6-218, 7-219, 8-229, 9-233, 10-251
ಬೌಲಿಂಗ್: ಯಾದವ್ 8-0-38-2, ಬಿನ್ನಿ 8-0-55-2, ಕುಲಕರ್ಣಿ 10-1-34-4, ಕರಣ್ ಶರ್ಮ 9-1-64-0, ಅಕ್ಷರ್ ಪಟೇಲ್ 7.1-0-51-2, ರೈನಾ 1-0-3-0.;

Write A Comment