ಕ್ರೀಡೆ

ರೋಹಿತ್ ಡಬಲ್ ಧಮಾಕ: ಎರಡನೆ ಬಾರಿ ದ್ವಿಶತಕದ ಸಾಧನೆ

Pinterest LinkedIn Tumblr

sharma

ಕೋಲ್ಕತಾ, ನ.13: ಗಾಯದ ಕಾರಣದಿಂದಾಗಿ ಹತ್ತು ವಾರಗಳ ಬಳಿಕ ಏಕದಿನ ಕ್ರಿಕೆಟ್‌ಗೆ ವಾಪಸಾದ ಅಗ್ರಸರದಿಯ ದಾಂಡಿಗ ರೋಹಿತ್ ಶರ್ಮ ಇಂದು ನಡೆದ ಶ್ರೀಲಂಕಾ ವಿರುದ್ಧ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೊ್ಫೀೀಟಕ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವದಾಖಲೆಯ ಎರಡನೆ ದ್ವಿಶತಕ ದಾಖಲಿಸಿದರು.
150ನೆ ವರ್ಷಾಚರಣೆಯ ಸಂಭ್ರಮದಲ್ಲಿರುವ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆರಂಭಿಕ ದಾಂಡಿಗನಾಗಿ ಅಜಿಂಕ್ಯ ರಹಾನೆ ಜೊತೆ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಲಂಕಾದ ಬೌಲರ್‌ಗಳ ದಾಳಿಯನ್ನು ಪುಡಿ ಪುಡಿ ಮಾಡಿದರು. 173 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮ 33 ಬೌಂಡರಿ ಮತ್ತು 9 ಸಿಕ್ಸರ್ ನೆರವಿನಲ್ಲಿ 264 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ವೈಯಕ್ತಿಕ ಮೊತ್ತದ ದಾಖಲೆಯನ್ನು ತನ್ನ ಹೆಸರಲ್ಲಿ ಬರೆದರು.
ಮೂರು ಜೀವದಾನ ಪಡೆದು ಲಂಕಾದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರೋಹಿತ್ ಶರ್ಮ ಅವರು ಕುಲಶೇಖರ ಅವರ 50ನೆ ಓವರ್‌ನ ಅಂತಿಮ ಎಸೆತದಲ್ಲಿ ಜಯವರ್ಧನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಷ್ಟರ ಹೊತ್ತಿಗೆ ಟೀಮ್ ಇಂಡಿಯಾದ ಸ್ಕೋರ್ 404ಕ್ಕೆ ತಲುಪಿತ್ತು.
ರೋಹಿತ್ ಶರ್ಮ 4 ರನ್ ಗಳಿಸಿದ್ದಾಗ ಎರಂಗರ 4.3ನೆ ಓವರ್‌ನಲ್ಲಿ ತಿಸ್ಸಾರ ಪೆರೆರಾರಿಂದ ಜೀವದಾನ ಪಡೆದಿದ್ದರು. ಇದು ಲಂಕಾದ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರೋಹಿತ್ ವೃತ್ತಿಜೀವನದಲ್ಲಿ ಎರಡನೆ ದ್ವಿಶತಕ ದಾಖಲಿಸಿದರು. ರೋಹಿತ್ ಶತಕ ತಲುಪುವ ಸ್ವಲ್ಪ ಹೊತ್ತಿನ ಮೊದಲು ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದ್ದರು. 29ನೆ ಓವರ್ ಮುಕ್ತಾಯಗೊಂಡಾಗ ಶರ್ಮ ಸ್ಕೋರ್ 78 ಆಗಿತ್ತು. 30ನೆ ಓವರ್‌ನಲ್ಲಿ ಕುಲಶೇಖರ್ ಓವರ್‌ನ 4 ಎಸೆತಗಳಲ್ಲಿ 15 ರನ್(4+6+4+1) ಕಬಳಿಸಿ ಸ್ಕೋರನ್ನು 93ಕ್ಕೆ ಏರಿಸಿದ್ದರು.
125ನೆ ಏಕದಿನ ಪಂದ್ಯವನ್ನಾಡುತ್ತಿರುವ 27ರ ಹರೆಯದ ರೋಹಿತ್ ಶರ್ಮ 31.1ನೆ ಓವರ್‌ನಲ್ಲಿ ಶಮಿಂದಾ ಎರಂಗ ಅವರ ಎಸೆತದಲ್ಲಿ 1 ರನ್ ಗಳಿಸಿ 5ನೆ ಶತಕ ಪೂರೈಸಿದರು. 100 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅವರು ಶತಕ ಗಳಿಸಿದರು.
ದ್ವಿತೀಯ ದ್ವಿಶತಕ : ರೋಹಿತ್ ಶರ್ಮ 45.3ನೆ ಓವರ್‌ನಲ್ಲಿ ಕುಲಶೇಖರ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡನೆ ಬಾರಿ ದ್ವಿಶತಕ ದಾಖಲಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.
151 ಎಸೆತಗಳಲ್ಲಿ 25 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಲ್ಲಿ ಶರ್ಮ ದ್ವಿಶತಕ ಗಳಿಸಿದರು.
ರೋಹಿತ್ ಶರ್ಮ ದ್ವಿಶತಕ ಗಳಿಸಿದ ಬೆನ್ನಲ್ಲೆ ಇನ್ನೊಂದು ಜೀವದಾನ ಪಡೆದರು. ಕುಲಶೇಖರ ಓವರ್‌ನಲ್ಲಿ ಪ್ರಸನ್ನ ಜೀವದಾನ ನೀಡಿದರು. 46.1 ಎರಂಗ ಎಸೆತದಲ್ಲಿ ಬೌಂಡರಿ ಬಾರಿಸಿ ಸ್ಕೋರ್‌ನ್ನು 210ಕ್ಕೆ ತಲುಪಿಸಿ ತನ್ನ ಹಿಂದಿನ ದಾಖಲೆಯನ್ನು ಉತ್ತಮಪಡಿಸಿದರು. ಸೆಹ್ವಾಗ್ ದಾಖಲೆ ಪತನ: 2013ರ ನವಂಬರ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಶರ್ಮ ಮೊದಲ ದ್ವಿಶತಕ(209) ದಾಖಲಿಸಿದ್ದರು. ಇಂದು ಇಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.
ಈ ವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ ಭಾರತದ ವೀರೇಂದ್ರ ಸೆಹ್ವಾಗ್ ಹೆಸರಲ್ಲಿತ್ತು. ಅವರು ಡಿ.8, 2011ರಲ್ಲಿ ಇಂದೋರ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ 219 ರನ್(149 ಎ,25ಬೌ, 7ಸಿ) ದಾಖಲಿಸಿದ್ದರು. ಈ ದಾಖಲೆಯನ್ನು ಶರ್ಮ ಮುರಿದರು. ಶರ್ಮ ಸ್ಕೋರ್ 222ಕ್ಕೆ ತಲುಪಿದ್ದಾಗ ಮತ್ತೆ ಜೀವದಾನ ಪಡೆದಿದ್ದರು. 48ನೆ ಓವರ್‌ನಲ್ಲಿ 19(4+1+4+4+6) ಮತ್ತು 49ನೆ ಓವರ್‌ನಲ್ಲಿ 12 ರನ್(4+1+6+1) ಗಳಿಸಿ ತನ್ನ ಸ್ಕೋರ್‌ನ್ನು 258ಕ್ಕೆ ಏರಿಸಿದರು.ಅಂತಿಮ ಓವರ್‌ನಲ್ಲಿ 6 ರನ್ ಗಳಿಸಿದ ರೋಹಿತ್ ಶರ್ಮ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಯತ್ನದಲ್ಲಿ ಎಡವಿದರು.

Write A Comment