ಬೆಂಗಳೂರು; ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಟಿ ರಾಗಿಣಿ ದ್ವಿವೇದಿ ಜಾಮೀನಿಗಾಗಿ ಇಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ನಟಿಯು ಈ ಹಿಂದೆಯೇ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಹೀಗಾಗಿ ರಾಗಿಣಿ ಮುಂಬೈ ಮೂಲದ ವಕೀಲರೊಬ್ಬರಿಂದ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಐದನೇ ಆರೋಪಿಯಾಗಿರುವ ವೈಭವ್ ಜೈನ್ ಪೊಲೀಸರಿಗೆ ಹೆದರಿ ಇದೀಗ ತಲೆಮರೆಸಿಕೊಂಡಿದ್ದು, ನಿರೀಕ್ಷನಾ ಜಾಮೀನು ನೀಡುವಂತೆ ನ್ಯಾಯಾಲಯದ ಎದುರು ಮನವಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.
ಡ್ರಗ್ಸ್ ಮಾಫಿಯಾ ಜೊತೆಗೆ ಸ್ಯಾಂಡಲ್‌ವುಡ್ ನಂಟು ಇದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ನಟಿ ರಾಗಿಣಿ ಅವರನ್ನು ನ್ಯಾಯಾಲಯ ಮೊದಲ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು. ಇದೀಗ ಹೆಚ್ಚುವರಿಯಾಗಿ ಐದು ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ. ಇನ್ನೂ ಮಂಗಳವಾರ ಬಂಧನಕ್ಕೆ ಒಳಗಾಗಿದ್ದ ನಟಿ ಸಂಜನಾ ಗಲ್ರಾನಿ ಅವರಿಗೆ ಐದು ದಿನಗಳ ಕಾಲ ಪೊಲೀಸ್ ಬಂಧಕ್ಕೆ ಒಳಪಡಿಸಲಾಗಿದೆ.
ಹೀಗಾಗಿ ಪೊಲೀಸರು ಸಂಜನಾ ಮತ್ತು ರಾಗಿಣಿಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಂದೇ ಕೋಣೆಯಲ್ಲಿ ಬಂಧಿಸಿದ್ದು, ಇಬ್ಬರನ್ನೂ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಹಲವು ಮಾಹಿತಿಗಳನ್ನು ಈಗಾಗಲೇ ಅಧಿಕಾರಿಗಳು ಕಲೆಹಾಕಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಿಗೆ ರಾಗಿಣಿ ಇಂದು ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿರುವ ಈ ಪ್ರಕರಣದಲ್ಲಿನ ಮಹತ್ವದ ಬೆಳವಣಿಗೆಯಾಗಿದೆ.
ಇನ್ನೂ ಐದನೇ ಆರೋಪಿ ವೈಭವ್ ಜೈನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಈ ಮೊದಲೇ ನೋಟಿಸ್ ನೀಡಿದ್ದಾರೆ. ಆದರೆ, ಆತ ಕೊರೋನಾ ಇದೆ ನಾನು ಕ್ವಾರಂಟೈನ್‌ನಲ್ಲಿದ್ದೇನೆ ಎಂದು ಹೆಳುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ. ಆದರೆ, ಕ್ವಾರಂಟೈನ್ ಮುಗಿಯುತ್ತಿದ್ದಂತೆ ಆತ ಇದೀಗ ನಾಪತ್ತೆಯಾಗಿದ್ದಾನೆ. ಹೀಗಾಗಿ ಈತನನ್ನು ಪೊಲೀಸರು ಬೆನ್ನತ್ತಿದ್ದಾರೆ ಎನ್ನಲಾಗುತ್ತಿದೆ. ನಾಪತ್ತೆಯಾಗಿರುವ ಆರೋಪಿಯ ಪರವಾಗಿಯೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ.
ನಟಿಯ ಜಾಮೀನು ಅರ್ಜಿಯನ್ನು ನಾಳೆ ಅಂದರೆ ಶುಕ್ರವಾರ ಸಿಸಿಹೆಚ್ 33 ನೇ ಕೋರ್ಟ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
Comments are closed.