ರಾಷ್ಟ್ರೀಯ

ಕೊರೊನಾ ಲಸಿಕೆಯ ಪ್ರಯೋಗ ಸ್ಥಗಿತಗೊಳಿಸಿದ ಭಾರತದ ಸೆರಮ್‌ ಇನ್ಸ್ಟಿಟ್ಯೂಟ್‌ ಕಂಪೆನಿ

Pinterest LinkedIn Tumblr


ಹೊಸದಿಲ್ಲಿ: ಬ್ರಿಟನ್‌ನಲ್ಲಿ ಕೊರೋನಾ ಲಸಿಕೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಯ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಭಾರತದಲ್ಲಿಯೂ ಇದೇ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಆಕ್ಸ್‌ಫರ್ಟ್‌ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನಿಕಾ ಕಂಪನಿಗಳು ತಯಾರಿಸಿದ್ದ ಕೋವಿಶೀಲ್ಡ್‌ ಲಸಿಕೆಯನ್ನು ತಯಾರಿಸುತ್ತಿದ್ದ ಸೆರಂ ಇನ್ಸ್ಟಿಟ್ಯೂಟ್‌ ಮೂರನೇ ಹಂತದ ವಾಕ್ಸಿನ್‌ ಪ್ರಯೋಗವನ್ನು ಸ್ಥಗಿತಗೊಳಿಸಿದೆ.

ಬ್ರಿಟನ್‌ ಬೆಳವಣಿಗೆ ನಂತರ ದೇಶದ ಔಷಧ ನಿಯಂತ್ರಕ ಸಂಸ್ಥೆ ಡಿಜಿಸಿಐ ಸೆರಂ ಇನ್ಸ್ಟಿಟ್ಯೂಟ್‌ಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿತ್ತು. ಬೇರೆ ದೇಶದಲ್ಲಿ ಲಸಿಕೆಯ ಪ್ರಯೋಗ ಸ್ಥಗಿತಗೊಳಿಸಲಾಗಿದ್ದರೂ ಭಾರತದಲ್ಲಿ ಯಾಕೆ ಇನ್ನೂ ಲಸಿಕೆಯ ಪ್ರಯೋಗವನ್ನು ಮುಂದುವರಿಸಲಾಗಿದೆ ಎಂದು ಇದರಲ್ಲಿ ಪ್ರಶ್ನಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆರಂ, ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ಆಸ್ಟ್ರಾಝೆನಿಕಾ ಪ್ರಯೋಗವನ್ನು ಮತ್ತೆ ಆರಂಭಿಸುವವರೆಗೆ ನಾವು ಭಾರತದ ಪ್ರಯೋಗವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಹೇಳಿದೆ. ಸದ್ಯ ಕಂಪನಿ ಲಸಿಕೆ ಪ್ರಯೋಗಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದ್ದು, ಸ್ವಯಂ ಸೇವಕರ ಹೆಸರು ನೋಂದಾಯಿಸಿಕೊಳ್ಳುತ್ತಿದೆ.

“ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿ ತಿಳಿಯಬಯಸುವವರು ಡಿಜಿಸಿಐ ಸಂಪರ್ಕಿಸಬಹುದು,” ಎಂದು ಸೆರಂ ಮುಖ್ಯಸ್ಥ ಅಡರ್‌ ಪೂನಾವಾಲ ತಿಳಿಸಿದ್ದಾರೆ.

Comments are closed.