ಸ್ಯಾಂಡಲ್ವುಡ್ನ ಹ್ಯಾಂಡ್ಸಮ್ ಹೀರೋ ಅನಂತ್ ನಾಗ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.ಇಂದಿಗೆ 72 ವರ್ಷ ತುಂಬಿ 73ನೇ ವಸಂತಕ್ಕೆ ಕಾಲಿಟ್ಟಿರುವ ಅನಂತ್ ನಾಗ್ ಅವರು ಇನ್ನೂ ಸಹ ಬಹು ಬೇಡಿಕೆಯ ನಟ. ಈಗಲೂ ಇವರಿಗೆ ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಿಂದ ಸಾಕಷ್ಟು ಆಫರ್ಗಳು ಬರುತ್ತಿವೆಯಂತೆ. ಅನಂತ್ ನಾಗ್ ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕವಾಗಿ. ಅದಕ್ಕೆ ಅವರನ್ನು ಆ್ಯಕ್ಸಿಡೆಂಟಲ್ ನಟ ಎನ್ನಲಾಗುತ್ತದೆ. ಸಾಕಷ್ಟು ಸಂದರ್ಶನಗಳಲ್ಲಿ ಅವರೇ ಈ ಕುರಿತಾಗಿ ಹೇಳಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಸಂಪಾದಿಸಿಕೊಂಡಿರುವ ಇವರಿಗೆ, ಈ ಲಾಕ್ಡೌನ್ನಲ್ಲಿ ಕನ್ನಡ ಸೇರಿದಂತೆ ಇತರೆ ಭಾಷೆಗಳಿಂದ 15ಕ್ಕೂ ಹೆಚ್ಚು ಸಿನಿಮಾಗಳಿಂದ ಅವಕಾಶ ಅರಸಿ ಬಂದಿದೆಯಂತೆ. ಆದರೆ ಅವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಯೋಚಿಸಿ, ಅವರು ನಿರ್ಧಾರ ತೆಗೆದುಕೊಳ್ಳುತ್ತಾರಂತೆ.
ಸಿನಿಮಾದಲ್ಲಿ ದೊಡ್ಡ ಸ್ಟಾರ್ಗಳು ಇದ್ದಾರೆಂದು ಅವರು ಎಂದೂ ಅದನ್ನು ಒಪ್ಪಿಕೊಳ್ಳುವುದಿಲ್ಲವಂತೆ. ಬದಲಾಗಿ ಸ್ಕ್ರಿಪ್ಟ್ ಹಾಗೂ ಪಾತ್ರ ಹೇಗಿದೆ ಎನ್ನುವುದರ ಮೇಲೆ ಅದನ್ನು ಒಪ್ಪಿಕೊಳ್ಳುತ್ತಾರಂತೆ ಅನಂತ್ ನಾಗ್. ಈಗಲೂ ಸಹ ಅನಂತ್ ನಾಗ್ ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿ.
ಅನಂತ್ ನಾಗ್ ಅವರ ಅಪರೂಪದ ಫೋಟೋ ಹಿಂದಿನ ಕಥೆ
ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ‘ಸಂಕಲ್ಪ’, ‘ದೇವರಕಣ್ಣು’, ‘ಹಂಸಗೀತೆ’ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ‘ಬಯಲು ದಾರಿ’ ಇನ್ನೂ ತೆರೆಕಂಡಿರಲಿಲ್ಲ. ಮುಂಬಯಿ-ಬೆಂಗಳೂರೆಂದು ಓಡಾಡಿಕೊಂಡಿದ್ದ ಅವರು ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಆಗೊಂದು ದಿನ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ‘ಮೇನಕಾ’ ಸಿನಿಪತ್ರಿಕೆಗೆಂದು ಅನಂತ್ ಫೋಟೋ ಕ್ಲಿಕ್ಕಿಸಲು ವುಡ್‌ಲ್ಯಾಂಡ್ಸ್‌ಗೆ ಹೋಗಿದ್ದರಂತೆ.
1976ರಲ್ಲಿ ಪ್ರಗತಿ ಅಶ್ವತ್ಥ ನಾರಾಯಣ ಅವರು ಅನಂತ್ ನಾಗ್ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಆಗ ಅನಂತ್ ಅವರು ‘ಕನ್ನೇಶ್ವರ ರಾಮ’ ಸಿನಿಮಾಗಾಗಿ ತಯಾರಿ ನಡೆಸಿದ್ದರು. ಆಗ ಆ ಹೋಟೆಲ್‌ನ ಕೋಣೆಯಲ್ಲಿ ವಿವಿದ ಭಂಗಿಗಳಲ್ಲಿ ಅನಂತ್ ನಾಗ್ ಅವರ ಫೋಟೋ ಕ್ಲಿಕ್ಕಿಸಿಕೊಂಡ ಛಾಯಾಗ್ರಾಹಕ ಅಶ್ವತ್ಥ್ ಅವರು ‘ಕನ್ನಯ್ಯರಾಮ’ ಕಾದಂಬರಿ ಓದುವ ಅನಂತ್‌ರನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ಎಸ್.ಕೆ.ನಾಡಿಗ್ ಅವರ ‘ಕನ್ನಯ್ಯರಾಮ’ ಕಾದಂಬರಿ ಆಧರಿಸಿದ ಈ ಸಿನಿಮಾವನ್ನು ಎಂ.ಎಸ್.ಸತ್ಯು ನಿರ್ದೇಶಿಸುತ್ತಿದ್ದರು. ಬಿ.ವಿ.ಕಾರಂತರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಶಬಾನಾ ಅಜ್ಮಿ, ಅಮೋಲ್ ಪಾಲೇಕರ್ ಮತ್ತಿತರರು ನಟಿಸಿದ್ದ ‘ಕನ್ನೇಶ್ವರ ರಾಮ’ ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿತ್ತು.
Comments are closed.