ಮುಂಬೈ (ಸೆಪ್ಟೆಂಬರ್ 04); ಮಹಾನಗರ ಮುಂಬೈ ಅಸುರಕ್ಷಿತ ಎಂದು ಭಾವಿಸಿದರೆ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಇಲ್ಲಿ ವಾಸಿಸುವ ಯಾವುದೇ ಹಕ್ಕಿಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಶುಕ್ರವಾರ ಖಡಕ್ ಉತ್ತರ ನೀಡಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ನಿನ್ನೆ ಟ್ವೀಟ್ ಮಾಡಿದ್ದ ಕಂಗನಾ ರನೌತ್, “ಡ್ರಗ್ ಮಾಫಿಯಾ ಹಾಗೂ ಸಿನಿಮಾ ಇಂಡಸ್ಟ್ರಿಯವರೇ ಸುಶಾಂತ್‌ನನ್ನು ಕೊಂದಿದ್ದಾರೆ. ಆದರೆ, ಈ ಕುರಿತ ಎಲ್ಲಾ ದೂರುಗಳನ್ನು ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹೀಗಾಗಿ ನನಗೆ ಪೊಲೀಸರ ಮೇಲೆ ನಂಬಿಕೆ ಇಲ್ಲ. ಅಲ್ಲದೆ, ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವಂತೆ ಬಾಸವಾಗುತ್ತಿದೆ” ಎಂದು ಜರಿದಿದ್ದರು. ಇದಲ್ಲದೆ, ಮಹಾರಾಷ್ಟ್ರದ ಆಡಳಿತರೂಢ ಮೈತ್ರಿ ಸರ್ಕಾರವನ್ನು “ತಾಲಿಬಾನ್”ಗೆ ಹೋಲಿಕೆ ಮಾಡಿದ್ದರು. ಈ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆದರೆ, ಕಂಗನಾ ಅವರ ಹೇಳಿಕೆಗೆ ಮಹಾರಾಷ್ಟ್ರ ಸರ್ಕಾರ ತೀವ್ರವಾಗಿ ಪ್ರತಿಕ್ರಿಯಿಸಿದೆ.
ನಟಿ ಕಂಗಾನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಮಹರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್, “ಕೊರೋನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಮುಂಬೈ ಪೊಲೀಸರು ತಮ್ಮ ಪ್ರಾಣವನ್ನು ಹೇಗೆ ತ್ಯಾಗ ಮಾಡುವ ಮೂಲಕ ಜನಸೇವೆ ಮಾಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಆದರೆ, ಓರ್ವ ನಟಿ ನಮ್ಮ ಪೊಲೀಸರ ಬಗ್ಗೆ ಇಂತಹ ಮಾತುಗಳನ್ನು ಹೇಳುವುದು ಸರಿಯಲ್ಲ, ನಾವು ಈ ಹೇಳಿಕೆಯನ್ನು ಖಂಡಿಸುತ್ತೇವೆ.
ಸಂಕಷ್ಟದ ದಿನಗಳಲ್ಲಿ ಮುಂಬೈ ಮತ್ತು ಮಹಾರಾಷ್ಟ್ರವನ್ನು ಪೊಲೀಸರು ರಕ್ಷಿಸಿದ್ದಾರೆ. ಆದರೂ, ನಟಿ ಕಂಗನಾ ರನೌತ್ ಅವರಿಗೆ ಇಲ್ಲಿ ವಾಸಿಸುವ ಬಗ್ಗೆ ಅಸುರಕ್ಷಿತ ಎಂದು ಭಾಸವಾದರೆ ನಮ್ಮ ನೆಲದಲ್ಲಿ ಅವರಿಗೆ ವಾಸಿಸುವ ಹಕ್ಕಿಲ್ಲ” ಎಂದು ಕಿಡಿಕಾರಿದ್ದಾರೆ.
ಆದರೆ, ಇದರ ಬೆನ್ನಿಗೆ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ 33 ವರ್ಷದ ನಟಿ ಕಂಗಾನಾ, “ಮುಂಬೈಗೆ ಹಿಂತಿರುಗಿ ಬರದಂತೆ ಅನೇಕ ಜನರು ನನ್ನನ್ನು ಬೆದರಿಸುತ್ತಿದ್ದಾರೆ. ಹಾಗಾಗಿ ಮುಂದಿನ ವಾರ ಸೆಪ್ಟೆಂಬರ್ 9 ರಂದು ಮುಂಬೈಗೆ ಪ್ರಯಾಣಿಸಲು ನಿರ್ಧರಿಸಿದ್ದೇನೆ. ನಾನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯವನ್ನು ಪೋಸ್ಟ್ ಮಾಡುತ್ತೇನೆ. ನಿಮಗೆ ಧೈರ್ಯವಿದ್ದರೆ ನನ್ನನ್ನು ತಡೆಯಿರಿ” ಎಂದು ಟ್ವೀಟ್ ಮಾಡುವ ಮೂಲಕ ಆಡಳಿತರೂಢ ಪಕ್ಷದ ನಾಯಕರನ್ನು ಕೆಣಕಿದ್ದಾರೆ.
ಇದೇ ಸಂದರ್ಭದಲ್ಲಿ ಶಿವಸೇನೆ ನಾಯಕ ಸಂಜಯ್ ರೌತ್ ವಿರುದ್ಧವೂ ಕಿಡಿಕಾರಿರುವ ಅವರು, “ಸಂಜಯ್ ರೌತ್ ನನಗೆ ಮುಕ್ತ ಬೆದರಿಕೆ ಹಾಕಿದ್ದಾರೆ. ಮತ್ತೆ ಮುಂಬೈಗೆ ಹಿಂದಿರುಗಬಾರದು ಎಂದಿದ್ದಾರೆ. ಇಷ್ಟು ದಿನ ಮುಂಬೈ ಬೀದಿಗಳಲ್ಲಿ ಆಜಾದಿ ಗೀಚು ಬರಹಗಳು ಕಾಣಿಸುತ್ತಿದ್ದವು. ಈಗ ಮುಕ್ತವಾಗಿಯೇ ಬೆದರಿಕೆ ಹಾಕಲಾಗುತ್ತಿದೆ. ಹೀಗಿದ್ದ ಮೇಲೆ ನನಗೆ ಏಕೆ ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗಬಾರದು?” ಎಂದು ಪ್ರಶ್ನಿಸಿದ್ದಾರೆ.
Comments are closed.