ಮನೋರಂಜನೆ

ಸಂತಸ ಎಂಬುದು ಮಂದಿರ-ಮಸೀದಿಯಲ್ಲಿಲ್ಲ, ಏಕತೆಯಲ್ಲಿದೆ; ನಟಿ ರಮ್ಯಾ

Pinterest LinkedIn Tumblr


ಬೆಂಗಳೂರು (ಜುಲೈ 07); ಸಂತಸ ಎಂಬುದು ಮಂದಿರ ಅಥವಾ ಮಸೀದಿ ಕಟ್ಟುವುದರಲ್ಲಿ ಇರುವುದಿಲ್ಲ ಬದಲಾಗಿ ಒಗ್ಗಟ್ಟು, ಏಕತೆಯಿಂದ ಜೊತೆ ಜೊತೆಯಾಗಿ ಕೂಡಿ ಬಾಳುವುದರಲ್ಲಿ ಇರುತ್ತದೆ ಎಂದು ಹೇಳುವ ಮೂಲಕ ಚಿತ್ರನಟಿ-ರಾಜಕಾರಣಿ ರಮ್ಯಾ ದಿವ್ಯ ಸ್ಪಂದನ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.

ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ನಂತರ ಕಳೆದ ಆಗಸ್ಟ್‌ 05 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ನಾಯಕರು ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಸ್ವಾಗತಿಸಿದ್ದಾರೆ.

ಈ ನಡುವೆ ಹಲವರು ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಂದಿರ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿರುವುದರ ವಿರುದ್ಧ ಕಿಡಿಕಾರಿದ್ದಾರೆ. ಒಟ್ಟಾರೆ ಕಳೆದ ಕೆಲ ದಿನಗಳಿಂದ ರಾಮ ಮಂದಿರ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪರ-ವಿರೋಧ ಚರ್ಚೆಗೆ ವೇದಿಕೆಯಾಗಿದೆ.

ಆದರೆ, ಇಷ್ಟು ದಿನ ಸಕ್ರೀಯ ರಾಜಕಾರಣ ಮತ್ತು ಸಾಮಾಜಿಕ ಜಾಲತಾಣಗಳಿಂದ ಕಣ್ಮರೆಯಾಗಿದ್ದ ನಟಿ-ರಾಜಕಾರಣಿ ರಮ್ಯಾ ಇದೀಗ ರಾಮ ಮಂದಿರದ ಕುರಿತು ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್‌ ಅನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ರಾಮ ಮಂದಿರದ ಕುರಿತು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿರುವ ನಟಿ ರಮ್ಯಾ, “ರಾಮಮಂದಿರ ಕಟ್ಟಲಾಗುತ್ತಿರುವುದರಿಂದ ಹಿಂದೂಗಳಿಗೆ ಸಂತಸವಾಗಿದೆ ಹೀಗಾಗಿ ನನಗೂ ಸಂತಸವಾಗುತ್ತಿದೆ. ಮಸೀದಿ ಕಟ್ಟಲಾಗುವುದು ಎಂದು ಮುಸ್ಲಿಮರಿಗೆ ಸಂತಸವಾದಾಗಲೂ ನನಗೆ ಸಂತಸವಾಗುತ್ತದೆ. ಆದರೆ, ಎಂದಿಗೂ ಸಂತಸದಿಂದಿರಲು ಅಥವಾ ದೇವರನ್ನು ತಿಳಿದುಕೊಳ್ಳಲು ಮಂದಿರ-ಮಸೀದಿಗಳು ಬೇಕಾಗಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಂಡರೆ ನನಗೆ ಇನ್ನೂ ಹೆಚ್ಚು ಸಂತಸವಾಗುತ್ತದೆ.

ಸಂತಸ ಎಂಬುದು ಒಗ್ಗಟ್ಟು- ಏಕತೆಯಿಂದ ಎಲ್ಲರೂ ಜೊತೆಜೊತೆಗೆ ಬದುಕುವುದರಲ್ಲಿದೆ. ಬಾಹ್ಯವಾದುದನ್ನು ತಿರಸ್ಕರಿಸಿ. ನಿಮ್ಮೊಳಗೆ ಇಣುಕಿ ನೋಡಿ. ಅಲ್ಲಿ ನಿಮ್ಮ ನಿಜವಾದ ದೇವರಿರುತ್ತಾನೆ ಮತ್ತು ನಿಜವಾದ ನೀವಿರುತ್ತೀರಿ” ಎಂದು ರಮ್ಯಾ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಫೇಸ್‌ಬುಕ್‌ನಲ್ಲಿ ರಾಮ ಮಂದಿರ ಕುರಿತು ರಮ್ಯಾ ಅವರ ಹೇಳಿಕೆಯನ್ನು ಅನೇಕರು ಒಪ್ಪಿಕೊಂಡಿದ್ದರೆ, ಇನ್ನೂ ಅನೇಕರು ಈ ಹೇಳಿಕೆಯನ್ನು ತೀವ್ರವಾಗಿ ಟೀಕೆಗೆ ಗುರಿಪಡಿಸಿದ್ದಾರೆ. ಅಲ್ಲದೆ, ಈ ಹೇಳಿಕೆ ಇದೀಗ ರಮ್ಯಾ ಅಭಿಮಾನಿಗಳು ಹಾಗೂ ಹಿಂದೂ ಪರ ಕಾರ್ಯಕರ್ತರ ನಡುವೆ ಪರ – ವಿರೋಧ ಚರ್ಚೆಗೂ ಗ್ರಾಸವಾಗಿದೆ,.

Comments are closed.