ಮನೋರಂಜನೆ

ಸುಶಾಂತ್ ಮತ್ತು ಮ್ಯಾನೇಜರ್‌ ದಿಶಾ ನಡುವೆ ಇದ್ದ ಸಂಬಂಧ ಏನು?

Pinterest LinkedIn Tumblr

ಕಳೆದ ಎರಡು ತಿಂಗಳಿನಿಂದ ಬಾಲಿವುಡ್‌ನಲ್ಲಿ ಬಿರುಗಾಳಿ ಎದ್ದಿದೆ. ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ಬಳಿಕ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಿಂದಿ ಚಿತ್ರರಂಗದ ಹಲವರ ಮೇಲೆ ಅನುಮಾನದ ದೃಷ್ಟಿ ಬೀರುವಂತಾಗಿದೆ. ಬೇರೆ ಬೇರೆ ಆಯಾಮದಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಷ್ಟು ದಿನ ಸೈಲೆಂಟ್‌ ಆಗಿದ್ದ ದಿಶಾ ಸಾಲಿಯಾನ್‌ ಪ್ರಕರಣಕ್ಕೆ ಈಗ ಮತ್ತೆ ಜೀವಬರುತ್ತಿದೆ.

ಸುಶಾಂತ್‌ಗೆ ದಿಶಾ ಸಾಲಿಯಾನ್‌ ಅವರು ಮಾಜಿ ಮ್ಯಾನೇಜರ್‌ ಆಗಿದ್ದರು. ಅಚ್ಚರಿ ಏನೆಂದರೆ, ಸುಶಾಂತ್‌ ಸಾಯುವುದಕ್ಕಿಂತ ಒಂದು ವಾರ ಮೊದಲು, ಅಂದರೆ ಜೂ.8ರಂದು ದಿಶಾ ಆತ್ಮಹತ್ಯೆ ಮಾಡಿಕೊಂಡರು. ಈ ಮೊದಲು ತನಿಖೆ ನಡೆಸಿದ್ದ ಮುಂಬೈ ಪೊಲೀಸರು, ಸುಶಾಂತ್‌ ಸಾವಿಗೂ ದಿಶಾ ಸಾವಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಮತ್ತೆ ಹೊಸದಾಗಿ ಕೇಸ್‌ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.

ಮಾಜಿ ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ನಂತರದಲ್ಲಿ ಸುಶಾಂತ್‌ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಇಬ್ಬರ ಸಾವಿಗೂ ಏನೂ ಕನೆಕ್ಷನ್‌ ಇರಲೇಬೇಕು ಎಂಬುದು ಹಲವರ ವಾದ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ಮುಖಂಡ ನಾರಾಯಣ್‌ ರಾಣೆ ಕೂಡ ಅದೇ ಅನುಮಾನ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯ ಬೆನ್ನಲ್ಲೇ ಮುಂಬೈ ಪೊಲೀಸರು ಹೊಸ ಪ್ರಕಟಣೆ ಹೊರಡಿಸಿದ್ದಾರೆ.

‘ದಿಶಾ ಅವರ ಸಾವು ಅಸಹಜ ಎನಿಸುತ್ತಿದೆ. ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೂ ದಿಶಾ ಸಾವಿಗೂ ಸಂಬಂಧ ಇದೆ ಎಂದು ಹಲವು ಸುದ್ದಿಗಳು ಹರಿದಾಡುತ್ತಿವೆ. ಯಾರ ಬಳಿಯಾದರೂ ಇದಕ್ಕೆ ಸಂಬಂಧಿಸಿದ ಸಾಕ್ಷಿ ಮತ್ತು ಮಾಹಿತಿಗಳಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ’ ಎಂದು ಪೊಲೀಸರು ಮರಾಠಿಯಲ್ಲಿ ಪ್ರಕಟಣೆ ಹೊರಡಿಸಿದ್ದಾರೆ ಎಂದು ವರದಿ ಆಗಿದೆ. ಅಲ್ಲದೆ, ಸುಶಾಂತ್‌ ಪ್ರಕರಣದ ರೀತಿಯೇ ದಿಶಾ ಸಾಲಿಯಾನ್‌ ಸಾವಿನ ಪ್ರಕರಣವನ್ನೂ ಸಿಬಿಐಗೆ ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ.

 

Comments are closed.