ತಿರುವನಂತಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮ ಹತ್ತಿರ ಇದ್ದಾಗ ಪ್ರಮುಖ ಕಾಂಗ್ರೆಸ್ ನಾಯಕರು ಹಿಂದುಪರ ನಿಲುವು ತೋರತೊಡಗಿದ್ದು ಗಮನಸೆಳೆದಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ಕಮಲನಾಥ್ ಮುಂತಾದವರ ನಡೆಯ ಹಿಂದೆ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಇರಾದೆ ಇದ್ದುದನ್ನು ಜನ ಗಮನಿಸಿದ್ದರು. ಆಗಸ್ಟ್ 5 ರಾಷ್ಟ್ರೀಯ ಏಕತೆಯ ದಿನ ಎಂದೆಲ್ಲ ಅವರು ಕೊಂಡಾಡಿದ್ದರು.
ಅಷ್ಟೇ ಅಲ್ಲ 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬಾಬರಿ ಮಸೀದಿಯ ಬೀಗ ತೆರೆದು ಶ್ರೀರಾಮಲಲ್ಲಾನ ಪೂಜೆಗೆ ಅವಕಾಶ ಮಾಡಿಕೊಟ್ಟದ್ದು, ಅಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದನ್ನೂ ಕಾಂಗ್ರೆಸ್ಸಿಗರು ಪ್ರಸ್ತಾಪಿಸಿದ್ದರು. ರಾಮಮಂದಿರ ನಿರ್ಮಾಣಕ್ಕೆ ನಾವು ಅಡ್ಡಿಯಾಗಿರಲಿಲ್ಲ ಎಂದೂ ಸಮಜಾಯಿಷಿ ಕೊಡತೊಡಗಿದ್ದು ಕಂಡುಬಂತು. ಈ ನಡುವೆ, ಕೇರಳದ ರಾಜ್ಯಪಾಲರಾಗಿರುವ ಆರೀಫ್ ಮೊಹಮ್ಮದ್ ಖಾನ್ ಅವರ ಸಂದರ್ಶನ ಆಂಗ್ಲ ಸುದ್ದಿಮಾಧ್ಯಮದಲ್ಲಿ ಪ್ರಕಟವಾಗಿದ್ದು, ರಾಜೀವ್ ಗಾಂಧಿ ಬಾಬರಿ ಮಸೀದಿ ಬೀಗ ತೆರೆದ ಹಿಂದಿನ ಕಥೆಯನ್ನು ಬಹಿರಂಗಪಡಿಸಿದ್ದಾರೆ.
ಅವರು ಹೇಳಿದ್ದಿಷ್ಟು- 1986ರಲ್ಲಿ ಅಯೋಧ್ಯೆಯ ಬೀಗ ತೆರೆದ ಪ್ರಸಂಗ ಒಂದು ಡೀಲ್ ಆಗಿತ್ತು ಎಂಬುದನ್ನು ನಾನು ಪದೇಪದೆ ಹೇಳುತ್ತಲೇ ಬಂದಿದ್ದೇನೆ. ಅಂದು ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮುಸ್ಲಿಂ ಪರ್ಸನಲ್ ಲಾ ಬೋರ್ಡ್(ಎಂಪಿಎಲ್ಬಿ) ನಡುವೆ ಒಂದು ಡೀಲ್ ಏರ್ಪಟ್ಟಿತ್ತು. ಅದರ ಭಾಗವಾಗಿ ಬಾಬರಿ ಮಸೀದಿ ಬೀಗ ತೆರೆಯಲಾಗಿತ್ತು. ಸುಪ್ರೀಂ ಕೋರ್ಟ್ ಶಾಬಾನೋ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ತಿದ್ದುಪಡಿ ಮಾಡಿಸುವ ಎಂಪಿಎಲ್ಬಿ ಬೇಡಿಕೆಯನ್ನು ರಾಜೀವ್ ಸರ್ಕಾರ 1986ರ ಜನವರಿ ಎರಡನೇ ವಾರ ಒಪ್ಪಿಕೊಂಡಿತ್ತು. ಇದು ಭಾರಿ ಪ್ರಮಾಣದ ಟೀಕೆಗೆ ಕಾರಣವಾಯಿತು. ಕೂಡಲೇ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಎಂಪಿಎಲ್ಬಿ ಜತೆಗೆ ಒಪ್ಪಂದ ಮಾಡಿಕೊಂಡ ರಾಜೀವ್ ಸರ್ಕಾರ, ಫೆಬ್ರವರಿ 1ರಂದು ಅಯೋಧ್ಯೆಯ ಬೀಗ ತೆರೆದುಬಿಟ್ಟರು. ಇದನ್ನು ನನ್ನ ಟೆಕ್ಸ್ಟ್ ಆ್ಯಂಡ್ ಕಂಟೆಕ್ಸ್ಟ್ ಎಂಬ ಪುಸ್ತಕದಲ್ಲಿ ಬರೆದಿದ್ದೇನೆ. ಬೀಗ ತೆರೆಯುವ ಮುನ್ನ ಎಂಪಿಎಲ್ಬಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ. ಅವರಿಗೆ ಈ ಮಾಹಿತಿ ನೀಡಿದ್ದೆ ಎಂದು ರಾಜೀವ್ ಗಾಂಧಿಯವರೇ ನನ್ನ ಬಳಿ ಹೇಳಿದ್ದರು. ಹೀಗಾಗಿ ಅವರ ಈ ನಡೆಗೆ ಮುಸ್ಲಿಮರಿಂದ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಹೀಗಾಗಿ ರಾಜೀವ್ ಗಾಂಧಿ ಇರುವ ತನಕ ಎಂಪಿಎಲ್ಬಿ ರಾಮಮಂದಿರದ ವಿಚಾರ ಪ್ರಸ್ತಾಪ ಮಾಡಲೇ ಇಲ್ಲ!.
Comments are closed.