ಚಂಡೀಗಢ: ಫೇಸ್‍ಬುಕ್ ಕಮೆಂಟ್ ಒಂದರಿಂದ ಶುರುವಾದ ಜಗಳ, ಯುವಕನೊಬ್ಬನ ಸಾವಿನತನಕ ಮುಂದುವರೆದಿರುವ ಭೀಕರ ಘಟನೆ ಚಂಡೀಗಢದಲ್ಲಿ ನಡೆದಿದೆ.
ಕೊಲೆಯಾದ ಯುವಕನ ಹೆಸರು ಸುಖಚೈನ್ ಸಿಂಗ್. 26 ವರ್ಷದ ಈ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಆರೋಪಿ ಮಾಜಿ ಸೈನಿಕನಾಗಿರುವ ಜಸ್‌ಬೀರ್ ಸಿಂಗ್.
ಅಷ್ಟಕ್ಕೂ ಆಗಿದ್ದೇನೆಂದರೆ, ಸುಖಚೈನ್ ಸಿಂಗ್ ತಂದೆ ಪರಮಜೀತ್ ಸಿಂಗ್ ಅವರು ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಾರೆ. ತಂದೆಯ ಅಂಗಡಿಯಲ್ಲಿ ಸುಖಚೈನ್ ಕೆಲಸ ಮಾಡುತ್ತಿದ್ದ. ಅಂಗಡಿಯ ಹೆಸರಿನಲ್ಲಿ ಫೇಸ್‌ಬುಕ್ ಪುಟವೊಂದನ್ನು ತೆರೆದಿದ್ದ ಈತ ಅಲ್ಲಿ ತಮ್ಮ ಅಂಗಡಿಯಲ್ಲಿ ಸಿಗುವ ವಸ್ತುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ.
ಈ ಪೇಜ್‌ಗೆ ವಿಸಿಟ್ ಮಾಡಿದ್ದ ಆರೋಪಿ ಜಸ್‌ಬೀರ್, ನಿಮ್ಮ ಅಂಗಡಿಯಲ್ಲಿ ಡ್ರಗ್ಸ್ ಗುಳಿಗೆಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದು ಕಮೆಂಟ್ ಮಾಡಿದ್ದ. ಮಾತ್ರವಲ್ಲದೇ ಕುಟುಂಬದವರ ಬಗ್ಗೆಯೂ ಅದೇ ಪೇಜ್‌ನಲ್ಲಿ ಕೆಟ್ಟದಾಗಿ ಕಮೆಂಟ್‌ಗಳನ್ನು ಹಾಕಿದ್ದ.
ಇದರಿಂದ ಸಿಟ್ಟೆಗೆದ್ದ ಯುವಕ, ಈ ರೀತಿಯೆಲ್ಲಾ ಮಾತನಾಡಬೇಡಿ ಎಂದು ಹೇಳಿದ್ದ. ಆದರೂ ಇದೇ ಚಾಳಿ ಆತ ಮುಂದುವರೆಸಿದ ಹಿನ್ನೆಲೆಯಲ್ಲಿ ಜಸ್‌ಬೀರ್ ಜತೆ ಜಗಳಕ್ಕಿಳಿದಿದ್ದಾನೆ.
ಇಬ್ಬರ ಮನೆಯೂ ಸಮೀಪದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ಆತ ಜಗಳ ಮಾಡತೊಡಗಿದಾನೆ. ಆಗ, ಛಾವಣಿಯ ಮೇಲೆ ನಿಂತಿದ್ದ ಜಸಬೀರ್ ಸಿಂಗ್ ಕೈಯಲ್ಲಿ ಬಂದೂಕು ಹಿಡಿದು ಬಂದು, ಜಗಳ ಮಾಡಿದರೆ ಶೂಟ್ ಮಾಡುವುದಾಗಿ ಹೇಳಿದ್ದಾನೆ. ಆಗ ಸಿಟ್ಟಿನಲ್ಲಿದ್ದ ಯುವಕ, ಮಾಡು ನೋಡೋಣ ಎಂದಿದ್ದಾನೆ.
ಆದರೆ ನಿಜವಾಗಿಯೂ ಜಸಬೀರ್ ಶೂಟ್ ಮಾಡಿಯೇಬಿಟ್ಟಿದ್ದಾನೆ. ಇವೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ. ಶೂಟ್ ಮಾಡಿದ ತಕ್ಷಣ ಜಸಬೀರ್ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಪ್ರಾಣ ಬಿಟ್ಟಿದ್ದ. ಜಸಬೀರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Comments are closed.