ಮನೋರಂಜನೆ

ಸುಶಾಂತ್ ಸಾವು ಪ್ರಕರಣ: ಸಿಬಿಐ ತನಿಖೆಗೆ ಕೇಂದ್ರ ಸರಕಾರ ಒಪ್ಪಿಗೆ

Pinterest LinkedIn Tumblr

ನವದೆಹಲಿ(. 05): ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ನಿತೀಶ್ ಕುಮಾರ್ ನೇತೃತ್ವ ಬಿಹಾರ ಸರ್ಕಾರ ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಮುಂಬೈ ಪೊಲೀಸರಿಂದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇಂದು ಸುಪ್ರೀಂ ಕೋರ್ಟ್ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರ ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ಮುಂಬೈನಲ್ಲಿ ನಿಧನರಾದರೂ ಅವರು ಬಿಹಾರ ಮೂಲದವರಾದ ಕಾರಣಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಸೂಚನೆ ಮೇರೆಗೆ ಪಾಟ್ನಾದ ಠಾಣೆಯೊಂದರಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿರುವ ನಟಿ ರಿಯಾ ಚಕ್ರಬರ್ತಿ ಅವರು ಪಾಟ್ನಾದಲ್ಲಿ ಎಫ್​ಐಆರ್ ಹಾಕುವುದು ಕಾನೂನುಬದ್ಧವಲ್ಲ. ಎಫ್​ಐಆರ್ ಅನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆ ಇದೀಗ ನಡೆಯುತ್ತಿದೆ. ಈ ವೇಳೆ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿರುವ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ಧಾರೆ.

ರಿಯಾ ಚಕ್ರಬರ್ತಿ ಅವರ ಎಫ್​ಐಆರ್ ವರ್ಗಾವಣೆ ಮನವಿಯ ಅರ್ಜಿ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ಪೊಲೀಸ್ ಅನ್ನು ತರಾಟೆಗೆ ತೆಗೆದುಕೊಂಡಿದೆ. ಬಿಹಾರ ಪೊಲೀಸರು ಮುಂಬೈಗೆ ಬಂದು ಈ ಪ್ರಕರಣದ ತನಿಖೆ ನಡೆಸಲು ಮುಂಬೈ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾ| ಹೃಷಿಕೇಶ್ ರಾಯ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಕೋಪ ವ್ಯಕ್ತಪಡಿಸಿದೆ.

ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರು ಈ ಪ್ರಕರಣದ ತನಿಖೆಗೆಂದು ಭಾನುವಾರ ಬಂದಾಗ ಅವರನ್ನು ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಬಲವಂತವಾಗಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿಟ್ಟಿದೆ. ಈ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ ಕೆಂಗಣ್ಣು ತೋರಿದೆ.

“ಇದು ಸರಿಯಾದ ಸಂದೇಶ ನೀಡುವುದಿಲ್ಲ. ಅವರು ಕರ್ತವ್ಯ ನಿಭಾಯಿಸಲು ಬಂದಿದ್ದರು. ವೃತ್ತಿಪರ ರೀತಿಯಲ್ಲಿ ನೀವು ವರ್ತಿಸಬೇಕಿತ್ತು” ಎಂದು ನ್ಯಾಯಪೀಠ ತಿಳಿಹೇಳಿತು.

ಸುಶಾಂತ್ ಸಾವು ಅನುಮಾನಸ್ಪದ ಸನ್ನಿವೇಶಗಳಲ್ಲಿ ನಡೆದಿರುವಂತೆ ತೋರುತ್ತಿದೆ. ಇದು ಬಹಳ ವಿಷಾದನೀಯ. ಆತನ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಬೇಕು. ನೀವು ಕೇಸ್​ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು 3 ದಿನದೊಳಗೆ ತಿಳಿಸಬೇಕು ಎಂದೂ ಕೋರ್ಟ್ ಆದೇಶಿಸಿತು.ಮಹಾರಾಷ್ಟ್ರ ಸರ್ಕಾರವು ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ವಿರೋಧಿಸುತ್ತಿದೆ. ಸುಶಾಂತ್ ಸಿಂಗ್ ಅವರ ಆಪ್ತೆಯಾಗಿದ್ದ ರಿಯಾ ಚಕ್ರಬರ್ತಿ ಕೂಡ ಸಿಬಿಐ ತನಿಖೆಯನ್ನು ವಿರೋಧಿಸಿದ್ದು, ಪಾಟ್ನಾದಲ್ಲಿರುವ ದಾಖಲಾಗಿರುವ ಎಫ್​ಐಆರ್ ಅನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿದ್ದಾರೆ. ಬಿಹಾರ ಮುಖ್ಯಮಂತ್ರಿ ಮತ್ತು ಇತರ ಸ್ಥಳೀಯ ರಾಜಕಾರಣಿಗಳ ಮಧ್ಯಪ್ರವೇಶದಿಂದ ಮಾತ್ರ ಬಿಹಾರದಲ್ಲಿ ಎಫ್​ಐಆರ್ ದಾಖಲಾಗಿದೆ. ಇದು ಕಾನೂನುಸಮ್ಮತವಲ್ಲ ಎಂದು ರಿಯಾ ತಮ್ಮ ವಕೀಲರ ಮೂಲಕ ವಾದಿಸಿದ್ಧಾರೆ.

ಸುಶಾಂತ್ ಸಿಂಗ್ ಸಾವಿಗೂ ಪಾಟ್ನಾಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆದ್ದರಿಂದ ಪಾಟ್ನಾ ಪೊಲೀಸರಿಗೆ ಈ ಪ್ರಕರಣದ ತನಿಖೆ ನಡೆಸಲು ಯಾವುದೇ ಆಧಾರ ಇಲ್ಲ ಎಂದು ನಟಿ ತಿಳಿಸಿದ್ದಾರೆ.

ಧೋನಿ ಅನ್​ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ನಾಯಕನ ಪಾತ್ರ ನಿರ್ವಹಿಸಿದ್ದ ಸುಶಾಂತ್ ಸಿಂಗ್ ರಾಜಪೂತ್ ಅವರು ಜೂನ್ 14ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವರ ಸಾವಿಗೆ ಬೇರೆಯೇ ಕಾರಣ ಇದೆ ಎಂದು ಚಿತ್ರರಂಗದ ಕೆಲವರು ಹಾಗೂ ಅವರ ಕುಟುಂಬ ಸದಸ್ಯರು ಅನುಮಾನಿಸಿದ್ಧಾರೆ. ಸುಶಾಂತ್ ಜೊತೆ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇರುವ ನಟಿ ರಿಯಾ ಚಕ್ರಬರ್ತಿಯತ್ತ ಹಲವರು ಬೊಟ್ಟು ಮಾಡಿದ್ದಾರೆ.

ಸುಶಾಂತ್ ಸಿಂಗ್ ಅವರು ಪಾಟ್ನಾದವರಾಗಿದ್ದು ಅವರ ತಂದೆ ಸೇರಿದಂತೆ ಕುಟುಂಬದ ಸದಸ್ಯರು ಅಲ್ಲಿಯೇ ಇದ್ದಾರೆ. ಸುಶಾಂತ್ ತಂದೆ ಪಾಟ್ನಾದಲ್ಲಿ ರಿಯಾ ಚಕ್ರಬರ್ತಿ ವಿರುದ್ಧ ಎಫ್​ಆರ್ ದಾಖಲಿಸಿದ್ದಾರೆ. ನಂತರ ಅವರ ಮನವಿ ಮೇರೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.

 

Comments are closed.