ಅಂತರಾಷ್ಟ್ರೀಯ

ಬೈರುತ್ ಸ್ಫೋಟಕ್ಕೆ 78 ಮಂದಿ ಬಲಿ; ಅವಘಡಕ್ಕೆ ಕಾರಣ ಬಹಿರಂಗ

Pinterest LinkedIn Tumblr

ಬೈರುತ್‌ (ಆಗಸ್ಟ್‌ 05); ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿರುವ ಭಾರೀ ಸ್ಟೋಟದಿಂದ ಅಲ್ಲಿನ ಜನರ ಬದುಕು ನುಚ್ಚು ನೂರಾಗಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಇದ್ದು, ಈವರೆಗೆ 78 ಜನರು ಮೃತಪಟ್ಟಿದ್ದಾರೆ.

ಸ್ಫೋಟ ಸಂಭವಿಸಿದ ವೇಳೆ ಭಾರೀ ಪ್ರಮಾಣದ ಶಬ್ದ ಕೇಳಿ ಬಂದಿದೆ. ಭಯಾನಕ ವಿಚಾರ ಎಂದರೆ ಸ್ಫೋಟ ಸಂಭವಿಸಿದ ಸ್ಥಳದಿಂಧ 10 ಕಿಮೀ ದೂರದವರೆಗಿನ ಕಟ್ಟಡಗಳು ಹಾನಿಗೆ ಒಳಗಾಗಿವೆ. ಬಂದರಿನ ಸುತ್ತಮುತ್ತಲಿನ ಜಾಗವಂತೂ ಹೇಳ ಹೆಸರಿಲ್ಲದೆ ನಾಶವಾಗಿ ಬಿಟ್ಟಿದೆ.

ಬೈರುತ್​ ಸ್ಫೋಟದಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ 4 ಸಾವಿರ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇವರಿಗೆ ಚಿಕಿತ್ಸೆ ನೀಡುವ ಕಾರ್ಯ ಮುಂದುವರಿದಿದೆ. ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ಸ್ಫೋಟದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯದಲ್ಲಿ ಸ್ಪೋಟ ಸಂಭವಿಸಿದ ತಕ್ಷಣ ಕಿತ್ತಳೆ ಬಣ್ಣದಲ್ಲಿ ಗೋಪುರ ಆಕಾರದಲ್ಲಿ ಹೊಗೆ ಆಕಾಶದ ಎತ್ತರಕ್ಕೆ ಹಾರಿದೆ. ಅಲ್ಲದೆ, ಶಬ್ಧದ ತೀವ್ರತೆ ದೊಡ್ಡ ತರಂಗಗಳನ್ನು ಸೃಷ್ಟಿಸಿದೆ. ಪರಿಣಾಮ ಬಂದರು ಪ್ರದೇಶದಲ್ಲಿದ್ದ ಗೋದಾಮುಗಳು ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಈ ವಿಡಿಯೋ ನೋಡಿದವರಿಗೆ ಸ್ಫೋಟದ ತೀವ್ರತೆ ಎಷ್ಟಿತ್ತು ಎಂಬುದು ಅಂದಾಜಾಗುತ್ತದೆ.

ಸ್ಫೋಟಕ್ಕೆ ಕಾರಣವೇನು?:

ಸ್ಪೋಟದ ರುವಾರಿ ಯಾರು? ಮತ್ತು ಈ ಸ್ಪೋಟಕ್ಕೆ ಕಾರಣ ಏನು? ಎಂಬ ಕುರಿತು ಈವರೆಗೆ ತಿಳಿದುಬಂದಿಲ್ಲ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ, ಒಂದು ಮಾಹಿತಿಯ ಪ್ರಕಾರ 2013-14 ಸಂದರ್ಭದಲ್ಲಿ ಹಡಗೊಂದರಿಂದ ಸುಮಾರು 2,750 ಟನ್​  ಅಮೋನಿಯಂ ನೈಟ್ರೇಟ್ ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಬೆಂಕಿ ತಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನುವ ಮಾತು ಕೇಳಿ ಬಂದಿದೆ.

ಬಂದರು ನಿರ್ಮಾಣ ಮತ್ತೆ ಆಗಬೇಕು:

ಸ್ಫೋಟದ ತೀವ್ರತೆಗೆ ಬಂದರು ಸಂಪೂರ್ಣ ನಾಶವಾಗಿ ಹೋಗಿದೆ. ಹೀಗಾಗಿ ಬಂದರು ಕಾರ್ಯವನ್ನು ಮತ್ತೆ ಆರಂಭ ಮಾಡಬೇಕಿದೆ. ಈಗ ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದು ಕೂಡ ದೊಡ್ಡ ಸವಾಲಿನ ಸಂಗತಿಯಾಗಿದೆ. ಗಾಯಗೊಂಡವರಲ್ಲಿ ಅನೇಕರ ದೇಹಕ್ಕೆ ಗಾಜಿನ ತುಂಡುಗಳು ಹೊಕ್ಕಿವೆ.

Comments are closed.