ಮನೋರಂಜನೆ

ನಟ ಚಿಕ್ಕಣ್ಣ ಜೊತೆ ‘ಟಗರು’ ಸರೋಜಾ ಮದುವೆ ವದಂತಿ: ಈ ಕುರಿತು ಸ್ಪಷ್ಟನೆ ನೀಡಿದ ನಟಿ!

Pinterest LinkedIn Tumblr


ಕನ್ನಡ ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಇದೇ ಜೂನ್‌ 22ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಆದರೆ, ಅದೇ ದಿನವೇ ಅವರ ಕುರಿತು ಒಂದು ವದಂತಿಯೊಂದು ಜೋರಾಗಿ ಹರಿದಾಡಲು ಆರಂಭವಾಯ್ತು. ಅಷ್ಟಕ್ಕೂ ಆ ವದಂತಿ ಏನು? ಚಿಕ್ಕಣ್ಣಗೆ ಮದುವೆ ಆಗಿದೆ. ಗುಟ್ಟಾಗಿ ಲಾಕ್‌ಡೌನ್‌ ಟೈಮ್‌ನಲ್ಲೇ ‘ಟಗರು’ ಚಿತ್ರದ ಕಾನ್‌ಸ್ಟೆಬಲ್‌ ಸರೋಜಾ ಖ್ಯಾತಿಯ ನಟಿ ತ್ರಿವೇಣಿ ರಾವ್ ಜೊತೆ ಚಿಕ್ಕಣ್ಣ ಮದುವೆ ಆಗಿಬಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಅಷ್ಟಕ್ಕೂ ಇಂಥದ್ದೊಂದು ವದಂತಿ ಹಬ್ಬಲು ಕಾರಣವಾಗಿದ್ದು, ಆ ಒಂದು ಫೋಟೋ!

ಜನ್ಮದಿನಕ್ಕೆ ವಿಶ್ ಮಾಡಿದ್ದ ತ್ರಿವೇಣಿ
ಜೂನ್‌ 22ರಂದು ಚಿಕ್ಕಣ್ಣ ಜನ್ಮವಿತ್ತು. ಹಾಗಾಗಿ, ಅವರ ಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದ ತ್ರಿವೇಣಿ, ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದರು. ಆದರೆ, ಆ ಫೋಟೋದಲ್ಲಿ ಇಬ್ಬರು ಮದುವೆ ಪೋಷಾಕಿನಲ್ಲಿದ್ದರು. ಯಾವಾಗ ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಲು ಆರಂಭವಾಯ್ತೋ, ಆಗಲೇ ಗಾಸಿಪ್‌ಗೆ ಜೀವ ಬಂದಿತ್ತು. ‘ಇಬ್ಬರು ಮದುವೆ ಆಗಿದ್ದಾರೆ’ ಎಂಬ ವದಂತಿ ಎಲ್ಲ ಕಡೆ ಹರಿದಾಡಲು ಆರಂಭವಾಯ್ತು!

ತ್ರಿವೇಣಿ ನೀಡಿದ್ದಾರೆ ಅಧಿಕೃತ ಸ್ಪಷ್ಟನೆ
ತಮ್ಮ ಬಗ್ಗೆ ಇಂಥದ್ದೊಂದು ವದಂತಿ ಜೋರಾಗಿ ಕೇಳಿಬರುತ್ತಿದೆ ಎಂಬುದು ತಿಳಿದ ಕೂಡಲೇ ನಟಿ ತ್ರಿವೇಣಿ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ಇದೇ ತಿಂಗಳು ಚಿಕ್ಕಣ್ಣ ಅವರ ಬರ್ತ್‌ಡೇ ಇತ್ತು. ಆಗ ನಾನೊಂದು ಪೋಸ್ಟ್‌ ಹಂಚಿಕೊಂಡಿದ್ದೆ. ಆದರೆ, ಈ ಪೋಸ್ಟ್‌ನಿಂದಾಗಿ ನನಗೂ ಮತ್ತು ಚಿಕ್ಕಣ್ಣ ಅವರಿಗೂ ಮದುವೆ ಆಗಿಹೋಗಿದೆ ಅಂತ ಎಲ್ಲ ಕಡೆ ಸುಳ್ಳು ಸುದ್ದಿಗಳನ್ನು ಟಿಕ್‌ಟಾಕ್‌ನಲ್ಲಿ ಟ್ರೋಲ್ಸ್‌ನವರು ಹರಡಿಸಿದ್ದಾರೆ. ನನಗೂ ಅವರಿಗೂ ಮದುವೆ ಆಗಿಲ್ಲ. ಒಂದು ಸಿನಿಮಾದಲ್ಲಿ ಬರುವಂತಹ ಸನ್ನಿವೇಶ ಅದು. ಇದನ್ನು ಯಾರೂ ನಂಬಬೇಡಿ. ಖಂಡಿತ ನಾನು ಮದುವೆ ಆಗುವಾಗ ನಿಮ್ಮೆಲ್ಲರಿಗೂ ಅಧಿಕೃತವಾಗಿ ಮಾಹಿತಿ ನೀಡಿಯೇ ಮದುವೆ ಆಗ್ತೀನಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ಇದೇ ಥರ ಇರಬೇಕು. ಎಲ್ಲರು ಸುರಕ್ಷಿತವಾಗಿರಿ, ಮನೆಯೊಳಗೆ ಇರಿ’ ಎಂದು ಹೇಳಿದ್ದಾರೆ ತ್ರಿವೇಣಿ.

‘ಟಗರು’ ಚಿತ್ರದಿಂದ ಸಿಕ್ಕಿತ್ತು ಜನಪ್ರಿಯತೆ
ನಟಿ ತ್ರಿವೇಣಿ ರಾವ್‌ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಪರಭಾಷೆಯ ಸಿನಿಮಾಗಳಲ್ಲೂ ಅವರು ಮಿಂಚಿದ್ದಾರೆ. ಅವರಿಗೆ ಬ್ರೇಕ್ ಸಿಕ್ಕಿದ್ದು, ಶಿವರಾಜ್‌ಕುಮಾರ್ ನಾಯಕತ್ವದ ‘ಟಗರು’ ಚಿತ್ರದಿಂದ. ಅದರಲ್ಲಿನ ಕಾನ್‌ಸ್ಟೆಬಲ್ ಸರೋಜಾ ಪಾತ್ರದ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಈಗಲೂ ಅನೇಕರು ಅವರನ್ನು ಅದೇ ಪಾತ್ರದಿಂದ ಗುರುತಿಸುತ್ತಾರೆ.

Comments are closed.