‘ಪುನರ್‌ವಿವಾಹ’, ‘ಅರಗಿಣಿ’ ಧಾರಾವಾಹಿ ನಟಿ ನವ್ಯಾ ರಾವ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಸರಳವಾಗಿ ಕುಟುಂಬಸ್ಥರ ಮುಂದೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಾಲಿಗ್ರಾಮ ಪಾರ್ಟಿ ಹಾಲ್‌ನಲ್ಲಿ ಇವರಿಬ್ಬರ ಮದುವೆ ನಡೆದಿದೆ.
ನವ್ಯಾ ಅವರ ಹಳದಿ ಕಾರ್ಯಕ್ರಮ ಕೂಡ ತುಂಬ ಸಿಂಪಲ್ ಆಗಿ ಸ್ನೇಹಿತರು, ಆತ್ಮೀಯರ ಮಧ್ಯೆ ನಡೆದಿತ್ತು. ಇವರಿಬ್ಬರ ಪರಿಚಯವಾಗಿ 10 ತಿಂಗಳು ಕಳೆದಿದೆ. ಪರಿಚಯದವರ ಮದುವೆಯಲ್ಲಿ ನವ್ಯಾ, ವರುಣ್ ಭೇಟಿಯಾಗಿತ್ತು. ಈ ಪರಿಚಯ ಸ್ನೇಹವಾಗಿ, ಪ್ರೀತಿಗೆ ತಿರುಗಿ ಈಗ ಮನೆಯವರ ಒಪ್ಪಿಗೆ ಸಿಕ್ಕಿ ಮದುವೆ ಕೂಡ ಆಗಿದೆ. ವರುಣ್ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ ಮನಸಾರೆ ಪ್ರೀತಿಸಿದೆ, ಮುಂದೊಂದು ದಿನ ಮದುವೆಯಾಗಲೇಬೇಕು, ಯಾಕೆ ಲೇಟ್ ಮಾಡೋದು ಅಂತ ಮನೆಯವರು ನವ್ಯಾ ಮತ್ತು ವರುಣ್ ಮದುವೆ ಮಾಡಿದ್ದಾರೆ.
ಮಾರ್ಚ್ 18, 2020ರಂದು ಬೆಂಗಳೂರಿನ ನಂದನಾ ಹೋಟೆಲ್‌ನಲ್ಲಿ ಅದ್ದೂರಿಯಾಗಿ ಸ್ನೇಹಿತರು, ಮನೆಯವರು, ಸಂಬಂಧಿಕರ ಮುಂದೆ ನವ್ಯಾ ಮತ್ತು ವರುಣ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಗ್ರ್ಯಾಂಡ್ ಆಗಿ ಮದುವೆಯಾಗಬೇಕು ಎಂಬ ಆಸೆ ನವ್ಯಾಗಿದ್ದರೂ ಕೂಡ ಲಾಕ್ ಡೌನ್ ಅವರ ಆಸೆಗೆ ತಣ್ಣೀರು ಹಾಕಿದೆ. ನಿಯಮ ಪಾಲಿಸಬೇಕು, ಆರೋಗ್ಯ ಮುಖ್ಯ ಎಂಬ ಕಾರಣಕ್ಕೆ ಈ ಜೋಡಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
‘ಪುನರ್ ವಿವಾಹ’ ಧಾರಾವಾಹಿ, ತೆಲುಗಿನ ‘ಮುತ್ಯಾಲ ಮುಗ್ಗು’ ಧಾರಾವಾಹಿಯಲ್ಲಿ ನವ್ಯಾ ನಟಿಸಿದ್ದರು. ‘ಮಹಾರಾಣಿ’ ಶೋನಲ್ಲಿಯೂ ಭಾಗವಹಿಸಿ ನವ್ಯಾ ರಾವ್ ಟಾಪ್ 10 ಸ್ಪರ್ಧಿಗಳಲ್ಲಿ ಒಬ್ಬರಾದರು. ಪ್ರಸ್ತುತ ‘ರಾಮಸೀತಾ’ ಧಾರಾವಾಹಿಯಲ್ಲಿ ನವ್ಯಾ ನಟಿಸುತ್ತಿದ್ದಾರೆ. ಸದ್ಯ ಪರಭಾಷೆಯ ಧಾರಾವಾಹಿಗಳಲ್ಲಿಯೇ ನವ್ಯಾ ಬ್ಯುಸಿಯಾಗಿದ್ದಾರೆ.
Comments are closed.