ಮನೋರಂಜನೆ

ಅಂದು ಕಿಶೋರ್‌ ಸರ್ಜಾ, ಇಂದು ಚಿರಂಜೀವಿ ಸರ್ಜಾ!

Pinterest LinkedIn Tumblr


ಚಂದನವನದ ಅಂಗಳಕ್ಕೆ ಚಿರಂಜೀವಿ ಸರ್ಜಾ ನಟನಾಗಿ ಪ್ರವೇಶ ಮಾಡಿ 11 ವರ್ಷಗಳಾಗಿತ್ತು. ಆಗಲೇ 22 ಸಿನಿಮಾಗಳಲ್ಲಿ ನಟಿಸಿದ್ದ ಅವರು, ಇನ್ನೂ ನಾಲ್ಕಾರು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದರು. ಚಿತ್ರರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರೂ, ಅವಕಾಶಗಳಿಗೇನು ಕೊರತೆ ಇರಲಿಲ್ಲ. ಸದಾ 3-4 ಸಿನಿಮಾಗಳ ಆಫರ್ ಇದ್ದೇ ಇರುತ್ತಿತ್ತು. ಇಂಥ ಪ್ರತಿಭಾವಂತ ಕಲಾವಿದ ವಯಸ್ಸಲ್ಲದ ವಯಸ್ಸಿನಲ್ಲಿ ಅಗಲಿದ್ದಾರೆ. ಅಂದಹಾಗೆ, ಸರ್ಜಾ ಈ ಕುಟುಂಬಕ್ಕೆ ಇಂತಹ ಆಘಾತ ಈ ಹಿಂದೆಯೂ ಆಗಿತ್ತು!

2009ರಲ್ಲಿ ನಿಧನರಾಗಿದ್ದರು ಕಿಶೋರ್‌!
ಹಿರಿಯ ನಟ ಶಕ್ತಿ ಪ್ರಸಾದ್ ಅವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬರು ಅರ್ಜುನ್‌ ಸರ್ಜಾ, ಮತ್ತೊಬ್ಬರು ಕಿಶೋರ್ ಸರ್ಜಾ. ಬಹುಭಾಷೆಯಲ್ಲಿ ನಟನಾಗಿ ಅರ್ಜುನ್ ಮಿಂಚಿದರೆ, ಕಿಶೋರ್ ಗಮನ ನಿರ್ದೇಶನದ ಮೇಲಿತ್ತು. ಡಿ.ರಾಜೇಂದ್ರ ಬಾಬು, ವಿಜಯ ರೆಡ್ಡಿ, ಸೋಮಶೇಖರ್ ಅವರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು, ‘ಅಳಿಮಯ್ಯ’, ‘ತುತ್ತಾಮುತ್ತಾ’, ‘ಜೋಡಿ’, ‘ಬಾವ ಬಾಮೈದ’ ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಚಿರು ಮೊದಲ ಸಿನಿಮಾಕ್ಕೆ ಕಿಶೋರ್ ನಿರ್ದೇಶನ
2009ರಲ್ಲಿ ಬಹಳ ಪ್ರೀತಿಯಿಂದ ತಮ್ಮ ಅಳಿಯ ಚಿರಂಜೀವಿಯನ್ನು ಸ್ಯಾಂಡಲ್‌ವುಡ್‌ನಲ್ಲಿ ಲಾಂಚ್ ಮಾಡುವುದಕ್ಕಾಗಿ ಕಿಶೋರ್-ಅರ್ಜುನ್‌ ‘ವಾಯುಪುತ್ರ’ ಸಿನಿಮಾ ಮಾಡಿದರು. ಇದಕ್ಕೆ ಕಿಶೋರ್ ನಿರ್ದೇಶಕರಾದರೆ, ಅರ್ಜುನ್‌ ನಿರ್ಮಾಪಕರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಅಳಿಯನಿಗಾಗಿ ಪ್ರೀತಿಯಿಂದ ಮಾಡಿದ ‘ವಾಯುಪುತ್ರ’ ತೆರೆಕಾಣುವುದಕ್ಕೂ ಮೊದಲೇ ಕಿಶೋರ್ ನಿಧನರಾಗಿಬಿಟ್ಟರು. 2009ರ ಜೂನ್ 27ರ ಶನಿವಾರ ಹೃದಯಾಘಾತದಿಂದ ಅವರು ನಿಧನರಾಗಿದ್ದರು.

ಇಹಲೋಕ ತ್ಯಜಿಸಿದ ಚಿರು
ಕಿಶೋರ್ ನಿಧನರಾದ 11 ವರ್ಷಕ್ಕೆ ಸರಿಯಾಗಿ, ಜೂನ್ ತಿಂಗಳಲ್ಲೇ ಚಿರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದು ಸರ್ಜಾ ಕುಟುಂಬಕ್ಕೆ ನಿಜಕ್ಕೂ ಭರಿಸಲಾಗದ ದುಃಖ. ಚಿರು, ಮೆಚ್ಚಿ ಮದುವೆಯಾಗಿದ್ದ ನಟಿ ಮೇಘನಾ ರಾಜ್‌ ಈಗ ಐದು ತಿಂಗಳ ಗರ್ಭಿಣಿ. ಇಂತಹ ಸಮಯದಲ್ಲಿ ಪತಿ ಅಗಲಿಕೆಯನ್ನು ಅವರಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಧ್ರುವ ಸರ್ಜಾ ಫಾರ್ಮ್‌ ಹೌಸ್‌ನಲ್ಲಿ ಅಂತ್ಯಕ್ರಿಯೆ
ಹಿರಿಯ ನಟ ಶಕ್ತಿ ಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಮಾಡಲಾಗಿದೆ. ಅಂತೆಯೇ ಕಿಶೋರ್ ಅಂತ್ಯಕ್ರಿಯೆಯೂ ಅಲ್ಲಿಯೇ ನಡೆದಿದೆ. ಇದೀಗ ನಟ ಚಿರು ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ, ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿ ಇರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿಯೇ ಸಹೋದರನ ಅಂತ್ಯಕ್ರಿಯೆ ಮಾಡಬೇಕು ಎಂದು ಧ್ರುವ ಸರ್ಜಾ ನಿರ್ಧರಿಸಿದ್ದಾರೆ. ಹಾಗಾಗಿ, ಅಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

Comments are closed.