ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಕನ್ನಡಿಗರಿಗೆ ಅವಮಾನ ಆಗಿದ್ದಕ್ಕೆ ಟ್ವೀಟ್ ಮಾಡುವ ಮೂಲಕ ರೊಚ್ಚಿಗೆದ್ದಿದ್ದಾರೆ.
ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಅವರ ಮೇಣದ ಪ್ರತಿಮೆಯನ್ನು ಸಿಂಗಾಪುರದಲ್ಲಿನ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಮ್‍ನಲ್ಲಿ ನಿರ್ಮಿಸಲಾಗಿದೆ. ಇದನ್ನು ಫೆ.5ರಂದು ಅವರು ಅನಾವರಣಗೊಳಿಸಿದ್ದಾರೆ. ಈ ವಿಷಯ ಹೊರಬರುತ್ತಿದ್ದಂತೆಯೇ ನಟಿ ಹರಿಪ್ರಿಯಾ ಕೊಂಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಜಲ್ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೆ ಟ್ವಿಟ್ಟರಿನಲ್ಲಿ ತಮ್ಮ ಕನ್ನಡದ ಕಲಾವಿದರಿಗೆ ಯಾಕೆ ಈ ರೀತಿಯ ಗೌರವ ಸಿಕ್ಕಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಯುವ ಸಾಧಕರನ್ನು ಗುರುತಿಸಿ ಅವರ ಮೇಣದ ಪ್ರತಿಮೆ ನಿರ್ಮಿಸಿ ಗೌರವ ನೀಡುತ್ತಿರುವುದು ಖುಷಿಯ ವಿಚಾರ. ಯುವ ಜನತೆ ಪಾಲಿಗೆ ಇದು ಗೌರವದ ವಿಷಯ. ಆದರೆ ನಮಗಿಂತಲೂ ಮೊದಲು ಸಾಧನೆ ಮಾಡಿದ ಹಿರಿಯರಿಗೆ ಈ ಮನ್ನಣೆ ಸಿಗಬೇಕು. ಅವರು ನಿರ್ಮಿಸಿಕೊಟ್ಟ ಹಾದಿಯಲ್ಲಿಯೇ ನಾವು ಸಾಗುತ್ತಿದ್ದೇವೆ. ಈವರೆಗೂ ಕನ್ನಡ ಚಿತ್ರರಂಗದ ಯಾರಿಗೂ ಈ ಮೇಣದ ಪ್ರತಿಮೆ ಗೌರವ ಸಿಗದೆ ಇರುವುದು ನಿಜಕ್ಕೂ ಆಲೋಚಿಸಬೇಕಾದ ವಿಚಾರ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್‍ನಾಗ್, ಪಂಡರೀಬಾಯಿ, ಜಯಂತಿ, ಬಿ.ಸರೋಜಾದೇವಿ, ಕಲ್ಪನಾ ಹಾಗೂ ಮಂಜುಳಾ ಅವರು ಚಿತ್ರರಂಗಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಹಾದಿಯಲ್ಲೇ ಸಾಕಷ್ಟು ಯುವ ಕಲಾವಿದರು ನಡೆದು ಬಂದಿದ್ದಾರೆ. ಅವರಿಗೂ ಈ ಗೌರವ ಸಿಕ್ಕಿಲ್ಲ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್‍ನಾಗ್ ಸೇರಿದಂತೆ ಮುಂತಾದ ಕನ್ನಡದ ಹಿರಿಯ ಕಲಾವಿದರಿಗೆ ಈ ಗೌರವ ಸಿಕ್ಕಿಲ್ಲ ಎಂದು ಧ್ವನಿ ಎತ್ತಿದ್ದಾರೆ. ನನ್ನ ಮಾತಿಗೆ ಸಹಮತ ವ್ಯಕ್ತಪಡಿಸುತ್ತೀರಾ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಹರಿಪ್ರಿಯಾ ಹೇಳಿದ್ದು ಸರಿ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಹೆಚ್ಚು ಜನ ಶೇರ್ ಮಾಡುತ್ತಿದ್ದಾರೆ.
Comments are closed.