ಕರ್ನಾಟಕ

ಅಮ್ಮನನ್ನು ಹತ್ಯೆ ಮಾಡಿ, ಸಹೋದರನಿಗೆ ಇರಿದು ಅಂಡಮಾನ್ ಗೆ ಪರಾರಿಯಾಗಿದ್ದ ಮಹಿಳಾ ಟೆಕ್ಕಿ ಬಂಧನ

Pinterest LinkedIn Tumblr


ಬೆಂಗಳೂರು: ತನ್ನ ತಾಯಿಯನ್ನು ಕೊಲೆ ಮಾಡಿ ಸಹೋದರನನ್ನು ಇರಿದು ಬಳಿಕ ಅಂಡಮಾನ್ ಗೆ ಪರಾರಿಯಾಗಿದ್ದ ಮಹಿಳಾ ಟೆಕ್ಕಿ ಬುಧವಾರದಂದು ಅಂಡಮಾನ್ ನಿಕೋಬಾರ್ ದ್ವೀಪಸಮೂಹದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಬೆಂಗಳೂರು ಮೂಲದ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ಸೋಮವಾರ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಬೆಂಗಳೂರಿನಿಂದ ಅಂಡಮಾನ್ ನಿಕೊಬಾರ್ ದ್ವೀಪ ಸಮೂಹಗಳಿಗೆ ಪರಾರಿಯಾಗಿರುವ ವಿಷಯ ಪೊಲೀಸ್ ತನಿಖೆಯಲ್ಲಿ ಬಹಿರಂಗವಾದ ಬಳಿಕ ಬೆಂಗಳೂರು ಪೊಲೀಸರ ತಂಡವೊಂದನ್ನು ಅಂಡಮಾನ್ ಗೆ ಕಳುಹಿಸಲಾಗಿದೆ ಹೀಗೆ ಅಲ್ಲಿಗೆ ತೆರಳಿದ್ದ ಪೊಲೀಸರ ತಂಡ ಕೊಲೆ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಎಂ.ಎನ್. ಅನುಚೇತ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುವ ಕಾರಣದಿಂದ ಬೆಂಗಳೂರಿಗೆ ಕರೆತರಲು ಪೊಲೀಸರು ಆಕೆಯನ್ನು ಬುಧವಾರದಂದು ಅಂಡಮಾನ್ ನಿಕೋಬಾರ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಗೆ ಮನವಿ ಸಲ್ಲಿಸಿದ್ದಾರೆ. ಈ ಬೀಭತ್ಸ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅನುಚೇತ್ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಮಹಿಳೆಯ ಚೂರಿದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆಕೆಯ ಸಹೋದರ ಪೊಲೀಸರಿಗೆ ನೀಡಿದ್ದ ಕೆಲವೊಂದು ಪ್ರಮುಖ ಮಾಹಿತಿಗಳಿಂದ ಆರೋಪಿ ಕೃತ್ಯ ಎಸಗಿದ ಬಳಿಕ ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಕಡೆಗೆ ಪರಾರಿಯಾಗಬಹುದೆಂಬ ಶಂಕೆ ಪೊಲೀಸರಲ್ಲಿ ಮೂಡಿತ್ತು. ಅದರ ಜಾಡು ಹಿಡಿದು ಅಲ್ಲಿಗೆ ತೆರಳಿದ್ದರಾಜ್ಯ ಪೊಲೀಸ್ ತಂಡ ಇದೀಗ ಹಂತಕಿ ಆರೋಪಿಯನ್ನು ಬಂಧಿಸಿದೆ.

Comments are closed.