
ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ನಿತಿನ್ ಅವರ ಡ್ಯಾನ್ಸ್ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಹಾಗೂ ನಟ ನಿತಿನ್ ತಮ್ಮ ಮುಂಬರುವ ‘ಭೀಷ್ಮ’ ಚಿತ್ರದ ಚಿತ್ರೀಕರಣಕ್ಕಾಗಿ ಇಟಲಿಗೆ ತೆರಳಿದ್ದಾರೆ. ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಇಬ್ಬರು ನಟ ಹೃತಿಕ್ ರೋಷನ್ ನಟಿಸಿದ ‘ವಾರ್’ ಚಿತ್ರದ ‘ಘುಂಗ್ರೂ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಬಳಿಕ ಈ ವಿಡಿಯೋವನ್ನು ರಶ್ಮಿಕಾ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ಹಾಕಿ ರಶ್ಮಿಕಾ ಅದಕ್ಕೆ, “ಲವ್ ಟು ವು ಹೃತಿಕ್ ಸರ್. ಇಟಲಿಯ ಪೊಸಿಟಾನೋದಿಂದ ಭೀಷ್ಮ ತಂಡ” ಎಂದು ಬರೆದು ಟ್ವೀಟ್ ಮಾಡಿದ್ದರು. ಸದ್ಯ ಈ ಟ್ವೀಟ್ ಅನ್ನು ನೋಡಿದ ಹೃತಿಕ್, ರಶ್ಮಿಕಾ ಹಾಗೂ ನಿತಿನ್ ಅವರ ಡ್ಯಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೃತಿಕ್ ಅವರು ರಶ್ಮಿಕಾ ವಿಡಿಯೋಗೆ ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹೃತಿಕ್ ತಮ್ಮ ಟ್ವಿಟ್ಟರಿನಲ್ಲಿ, “ಸ್ವೀಟ್. ರಶ್ಮಿಕಾ ಹಾಗೂ ನಿತಿನ್‍ಗೆ ಧನ್ಯವಾದಗಳು. ನಿಮ್ಮ ಭೀಷ್ಮ ಚಿತ್ರಕ್ಕೆ ಶುಭಾಶಯಗಳು. ಲವ್ ಯೂ” ಎಂದು ರೀ-ಟ್ವೀಟ್ ಮಾಡಿದ್ದಾರೆ.
ನಿರ್ದೇಶಕ ವೆಂಕಿ ಕುದುಮುಲಾ ಭೀಷ್ಮ ಚಿತ್ರದ ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
Comments are closed.