ಕರ್ನಾಟಕ

ಹೆಬ್ಬೆಟ್ಟು’ ನೀಡದಿದ್ರೆ 2020 ಫೆಬ್ರವರಿಗೆ ಪಡಿತರ ಕಟ್‌!

Pinterest LinkedIn Tumblr


ಮೈಸೂರು: ಮುಂದಿನ ಫೆಬ್ರವರಿ ತಿಂಗಳ ಅಂತ್ಯದೊಳಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಆಯಾ ಕೇಂದ್ರಗಳಿಗೆ ತೆರಳಿ ಹೆಬ್ಬೆಟ್ಟು ಗುರುತು ಸಂಗ್ರಹ ಮಾಡಿಸದಿದ್ದರೆ ನಿಮ್ಮ ಪಡಿತರ ಕಟ್‌ ಆಗಲಿದೆ!

ರಾಜ್ಯ ಸರಕಾರ ಈಗಾಗಲೇ ಮೈಸೂರು ನಗರ ಸೇರಿದಂತೆ ಜಿಲ್ಲೆಯ 7,29,595 ಮಂದಿಗೆ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ನೀಡಿದ್ದು, ಅವರೆಲ್ಲರಿಗೂ ದವಸ ಧಾನ್ಯಗಳನ್ನು ನೀಡುತ್ತಿದೆ. ಈಗಾಗಲೇ ಅಂತರ್ಜಾಲದ ಮೂಲಕ ಪಡಿತರ ಚೀಟಿ ನೀಡಿ 7 ವರ್ಷ ಕಳೆದಿದ್ದು, ಪಡಿತರ ಚೀಟಿಯಲ್ಲಿನ ಗೊಂದಲ ನಿವಾರಿಸಲು ಹಾಗೂ ಪಡಿತರ ಚೀಟಿದಾರರು ಜೀವಂತವಾಗಿದ್ದಾರೆಯೇ? ಅವರ ಹೆಸರಿನಲ್ಲಿ ಬೇರೆಯವರು ಅಕ್ರಮವಾಗಿ ಪಡಿತರ ಪಡೆಯುತ್ತಿದ್ದಾರೆಯೇ? ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಮತ್ತೆ ಹೆಬ್ಬೆಟ್ಟು ಸಂಗ್ರಹಕ್ಕೆ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಫೆಬ್ರವರಿ ತಿಂಗಳ ಗಡುವು ನೀಡಲಾಗಿದೆ. ಒಂದು ಮನೆಯಲ್ಲಿ10, 5 ಇದ್ದೇವೆ ಎಂದು ಕಾರ್ಡ್‌ ಮಾಡಿಸಿಕೊಂಡವರ ನಿಜ ಸ್ಥಿತಿ ತಿಳಿಯಲು ಹೆಬ್ಬೆರಳು ಗುರುತು ಸಂಗ್ರಹ ನಡೆಸಲಾಗುತ್ತದೆ. 5 ಅಥವಾ 7 ವರ್ಷಕ್ಕೊಮ್ಮೆ ಇದು ನವೀಕರಣ ಆಗಬೇಕೆಂದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾಲಾವಕಾಶ ವಿಸ್ತರಣೆ: ಸದ್ಯ ಆನ್‌ಲೈನ್‌ ಮೂಲಕ ಪಡಿತರ ಚೀಟಿ ಪಡೆದಿರುವ ಕುಟುಂಬದ ಸದಸ್ಯರ ಆಧಾರ್‌ ಕಾರ್ಡ್‌ ಜೋಡಣೆ ಮಾಡಲಾಗಿದೆ. ಹೆಬ್ಬೆರಳು ಗುರುತು ಸಂಗ್ರಹಕ್ಕಾಗಿ ಬಯೋ ಮೆಟ್ರಿಕ್‌ ಪ್ರಕ್ರಿಯೆ ನಡೆದಿದೆ. ಇದಕ್ಕಾಗಿ ಡಿ.31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಕಡಿಮೆ ಸಮಯದಲ್ಲಿಜಿಲ್ಲೆಯ ಎಲ್ಲಾನಾಗರಿಕರ ಹೆಬ್ಬೆಟ್ಟು ಗುರುತು ಸಂಗ್ರಹ ನೀಡಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯಲ್ಲಿಶೇ.35ರಷ್ಟು ಮಂದಿ ಮಾತ್ರ ಹೆಬ್ಬೆರಳು ಸಂಗ್ರಹವನ್ನು ಆಯಾ ಕೇಂದ್ರಗಳಲ್ಲಿಮಾಡಿಸಿದ್ದಾರೆ. ಶೇ.65ರಷ್ಟು ಮಂದಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿಬಿಪಿಎಲ್‌ ಕಾರ್ಡುದಾರರು ಫೆಬ್ರವರಿ ತಿಂಗಳೊಳಗೆ ಹೆಬ್ಬೆಟ್ಟು ಸಂಗ್ರಹ ಕೊಡಲು ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಒಂದು ವೇಳೆ ಫೆಬ್ರವರಿ ಮುಗಿದ ನಂತರವೂ ಹೆಬ್ಬೆಟ್ಟು ಸಂಗ್ರಹಕ್ಕೆ ಕುಟುಂಬದ ಸದಸ್ಯರು ಮುಂದಾಗದಿದ್ದರೆ ಅವರಿಗೆ ನೀಡುತ್ತಿರುವ ಪಡಿತರ ನಿಲ್ಲಿಸುವ ಎಚ್ಚರಿಕೆಯನ್ನು ಆಹಾರ ಇಲಾಖೆ ನೀಡಿದೆ.

ಕಾರ್ಡ್‌ ಹಿಂದಿರುಗಿಸಿ: ಇದೇ ವೇಳೆ ಜಿಲ್ಲೆಯಲ್ಲಿಅಕ್ರಮವಾಗಿ ಕೆಲವರು ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ವಾರ್ಷಿಕ ವೇತನ ಹೆಚ್ಚಿದ್ದರೂ, ಕಾರು, ಸ್ವತಃ ಮನೆ ಇರುವವರು ಸುಳ್ಳು ದಾಖಲೆ ನೀಡಿ ಪ್ರತಿ ತಿಂಗಳು ಪಡಿತರ ಪಡೆಯುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿಅಕ್ರಮ ಪತ್ತೆ ಹಚ್ಚಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮೂರು ಬಾರಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಜಗ್ಗದಿದ್ದರೆ ಅಕ್ರಮ ಕಾರ್ಡ್‌ಗಳನ್ನು ರದ್ದುಪಡಿಸಿ, ಇದುವರೆಗೂ ಪಡೆದ ಪಡಿತರಕ್ಕೆ ಬದಲು ಅವರಿಂದ ನಗದು ಸಂಗ್ರಹಿಸಲು ಆಲೋಚಿಸಿದೆ. ಕುಟುಂಬ ಸದಸ್ಯರ ಖಾತರಿ ಪ್ರಕ್ರಿಯೆಯೂ ಇದಕ್ಕೆ ಪೂರಕವಾಗಿದೆ.

ಸರಕಾರಕ್ಕೆ ಪ್ರಸ್ತಾವ: ಇದೇ ವೇಳೆ ವೃದ್ಧರ ಬಗ್ಗೆ ವಿಶೇಷ ಗಮನ ನೀಡಲು ಆಹಾರ ಇಲಾಖೆ ಚಿಂತನೆ ನಡೆಸಿದೆ. 70 ವರ್ಷ ಮೀರಿರುವವರ ಹೆಬ್ಬೆಟ್ಟು ಬಯೋಮೆಟ್ರಿಕ್‌ ಗುರುತಿಸದೇ ಇದ್ದರೆ ಅವರಿಗೆ ವಿಶೇಷ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಆ ನಂತರ ಏನು ಮಾಡಬೇಕೆಂಬ ತೀರ್ಮಾನವನ್ನು ಸರಕಾರಕ್ಕೆ ಬಿಡಲಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.

ಯಾವ ಸಮಯದಲ್ಲಿಪಡಿತರ?: ಬಹುತೇಕರು ಮಧ್ಯಾಹ್ನ, ಸಂಜೆ ಅಂತ ಹೊತ್ತಲ್ಲದ ಸಮಯದಲ್ಲಿಪಡಿತರ ಪಡೆಯಲು ಹೋಗುತ್ತಾರೆ. ಆದರೆ, ನ್ಯಾಯಬೆಲೆ ಅಂಗಡಿ ಸಮಯ ಬೆಳಗ್ಗೆ 7ರಿಂದ 12 ಗಂಟೆ, ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಇರುತ್ತದೆ. ಪ್ರತಿ ಮಂಗಳವಾರ ರಜೆ ಇರುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಶಿವಣ್ಣ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ಅಶಕ್ತರಿಗೆ ನೆರವು: ಅಶಕ್ತರು ಹಾಗೂ ವೃದ್ಧರು ಸರತಿ ಸಾಲಿನಲ್ಲಿನಿಂತು ಪಡಿತರ ಪಡೆಯಲು ಆಗುವುದಿಲ್ಲ. ಈ ನಿಟ್ಟಿನಲ್ಲಿಅಂತವರಿಗೂ ಅನುಕೂಲವಾಗುವ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಚಿಂತನೆ ನಡೆಸುತ್ತಿದೆ.

ಜಿಲ್ಲೆಯಲ್ಲಿಬಿಪಿಎಲ್‌ ಕಾರ್ಡುದಾರರು- 7,08,000
ಎಪಿಎಲ್‌ ಕಾರ್ಡುದಾರರು- 21,595
ನ್ಯಾಯಬೆಲೆ ಅಂಗಡಿ- 1014

“ಇಲ್ಲಿಯವರೆಗೆ ಶೇ.35ರಷ್ಟು ಮಂದಿ ಮಾತ್ರ ಹೆಬ್ಬೆರಳು ಸಂಗ್ರಹ ಮಾಡಿದ್ದಾರೆ. ಫೆಬ್ರವರಿವರೆಗೂ ಕಾಲಾವಕಾಶವಿದೆ. ಆನಂತರವೂ ಮಾಡಿಸಿಕೊಳ್ಳದಿದ್ದರೆ ತಾತ್ಕಾಲಿಕವಾಗಿ ಪಡಿತರ ರದ್ದು ಮಾಡಲಾಗುವುದು. ಹೆಬ್ಬೆಟ್ಟು ಮಾಡಿದ ಮೇಲೆ ಪುನಃ ನೀಡಲಾಗುವುದು.”
-ಶಿವಣ್ಣ, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

Comments are closed.