ಚೆನ್ನೈ: ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದೀಗ ನಿತ್ಯಾನಂದನ ಜೊತೆಗಿರುವ ಫೋಟೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿನ್ಮಯಿ ಹಾಗೂ ಅವರ ತಾಯಿ ನಿತ್ಯಾನಂದನಿಂದ ಹೂ ಪಡೆಯುತ್ತಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಅಭಿಮಾನಿ ಚಿನ್ಮಯಿ ಅವರಲ್ಲಿ ನೀವು ನಿತ್ಯಾನಂದನ ಭಕ್ತರೇ ಎಂದು ಕೇಳಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ಚಿನ್ಮಯಿ ಅವರು ನೈಜ ಹಾಗೂ ನಕಲಿ ಚಿತ್ರ ಎರಡೂ ಫೋಟೋಗಳನ್ನು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನೈಜ ಚಿತ್ರದಲ್ಲಿ ಚಿನ್ಮಯಿ ಮತ್ತು ತಾಯಿ ದೇವಾಲಯ ಅರ್ಚಕರಿಂದ ಪ್ರಸಾದ ಪಡೆಯುತ್ತಿದ್ದರೆ, ಕಿಡಿಗೇಡಿಗಳು ಈ ಚಿತ್ರವನ್ನು ಎಡಿಟ್ ಮಾಡಿ ನಿತ್ಯಾನಂದನನ್ನು ಸೇರಿಸಿದ್ದಾರೆ. ಇದರಲ್ಲಿ ಹೂವು ನೀಡುತ್ತಿರುವ ಅರ್ಚಕರ ಜಾಗಕ್ಕೆ ನಿತ್ಯಾನಂದನ ಫೋಟೋ ಹಾಕಲಾಗಿದೆ.
ಇದು ನಕಲಿ ಫೋಟೋ ಎಂದು ಹಲವು ಬಾರಿ ಹೇಳಿದರೂ ಅಭಿಮಾನಿಗಳು ಯಾಕೆ ಪದೇ ಪದೆ ಈ ಫೋಟೋವನ್ನು ಹರಿಬಿಡುತ್ತಿದ್ದಾರೆ ತಿಳಿಯುತ್ತಿಲ್ಲ. ಇದನ್ನು ಸುಮ್ಮನೆ ಮಾಡುತ್ತಿದ್ದಿರೋ ಅಥವಾ ಯಾರಾದರೂ ಹಣ ಕೊಟ್ಟು ಮಾಡಿಸುತ್ತಿದ್ದಾರೋ ಎಂದು ಪ್ರಶ್ನಿಸಿದ್ದಾರೆ.
ಈ ಫೋಟೋ ಟ್ವೀಟ್ ಮಾಡಿದ ವ್ಯಕ್ತಿಯ ಟ್ವಿಟ್ಟರ್ ಖಾತೆಯ ಲಿಂಕನ್ನು ಚಿನ್ಮಯಿ ತಮ್ಮ ಟ್ವೀಟಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆ ಖಾತೆಯಿಂದ ಇದೀಗ ಪೋಸ್ಟ್ ಡಿಲೀಟ್ ಆಗಿದ್ದು ಈ ಕುರಿತು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಚಿನ್ಮಯಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.
ತಮಿಳಿನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಕನ್ನಡದಲ್ಲಿಯೂ ಹಲವು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಗಾಯಕ ರಘು ದೀಕ್ಷಿತ್ ಹಾಗೂ ತಮಿಳು ಸಾಹಿತಿ ವೈರಮುತ್ತು ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಯಾಗಿದ್ದರು.
Comments are closed.