ಮನೋರಂಜನೆ

ಪೈಲ್ವಾನ್ ಚಿತ್ರತಂಡದಿಂದ ಸೈಬರ್ ಕ್ರೈಂಗೆ ದೂರು

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿದ ‘ಪೈಲ್ವಾನ್’ ಚಿತ್ರ ಪೈರಸಿಯಾಗಿದೆ ಎಂದು ಚಿತ್ರತಂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕಳೆದ 12ರಂದು ಪ್ಯಾನ್ ಇಂಡಿಯಾ ಪೈಲ್ವಾನ್ ಚಿತ್ರ 3 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಂಡಿತ್ತು. ಆದರೆ ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್ ಕ್ರೈಂಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ವಪ್ನ ಕೃಷ್ಣ ಅವರು, “ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಇಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ” ಎಂದು ತಿಳಿಸಿದ್ದಾರೆ.

ಈ ಚಿತ್ರ ಗುರುವಾರ ಭರ್ಜರಿಯಾಗಿ ದೇಶ ವಿದೇಶಗಳಲ್ಲಿ ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದಲ್ಲಿ ಎಲ್ಲಾ ಕಡೆ ಅಬ್ಬರಿಸಿದೆ. ಇಲ್ಲಿವರೆಗೆ ಪೈಲ್ವಾನ್ ಕರ್ನಾಟಕದಲ್ಲೇ 10 ಕೋಟಿ ರೂ. ಗಳಿಸಿದೆ. ಇನ್ನೂ ದಕ್ಷಿಣ ಮತ್ತು ಉತ್ತರ ಭಾರತದಲ್ಲಿ 8 ರಿಂದ 12 ಕೋಟಿ ಗಳಿಕೆಯಾಗಿದೆ. ಒಟ್ಟು ಪೈಲ್ವಾನ್ ಸಿನಿಮಾ 18 ರಿಂದ 22 ಕೋಟಿ ಗಳಿಕೆ ಕಂಡಿದೆ.

ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

Comments are closed.