ಮನೋರಂಜನೆ

ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ ಮಾತುಗಳನ್ನು ಬಹಿರಂಗಪಡಿಸಿದ ಕೊಹ್ಲಿ

Pinterest LinkedIn Tumblr


ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾರನ್ನು ಮೊದಲ ಬಾರಿಗೆ ಭೇಟಿಯಾದಾಗ ಹೇಳಿದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಡಿಸೆಂಬರ್ 2017 ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅವರು 2013ರಲ್ಲಿ ಮೊದಲ ಬಾರಿಗೆ ಜಾಹೀರಾತಿನಲ್ಲಿ ನಟಿಸುವ ಮೂಲಕ ಪರಸ್ಪರ ಭೇಟಿಯಾದಾಗ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಯಿತು.

ಈಗ ತಮ್ಮ ಮೊದಲ ಭೇಟಿಯ ಬಗ್ಗೆ ಅಮೆರಿಕದ ಟೆಲಿವಿಷನ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ಕೊಹ್ಲಿ, ನಾನು ಮೊದಲು ಅನುಷ್ಕಾಳನ್ನು ಭೇಟಿಯಾದಾಗ ಜೋಕ್ ಮಾಡಲು ಹೋಗಿ ನಗೆಪಾಟಲಿಗೆ ಒಳಗಾಗಿದ್ದೆ ಎಂದು ಹೇಳಿದ್ದಾರೆ. ನಾನು ಶಾಂಪೂ ಒಂದರ ಜಾಹೀರಾತು ಶೂಟಿಂಗ್‍ನಲ್ಲಿ ಮೊದಲು ಅನುಷ್ಕಾಳನ್ನು ಭೇಟಿಯಾಗಿದ್ದು, ನನ್ನ ಮ್ಯಾನೇಜರ್ ಬಂದು ನೀವು ಅನುಷ್ಕಾ ಅವರ ಜೊತೆ ನಟನೆ ಮಾಡಬೇಕು ಎಂದು ಹೇಳಿದಾಗ ನಾನು ನರ್ವಸ್ ಆಗಿದ್ದೆ ಎಂದು ಹೇಳಿದ್ದಾರೆ.

ಮೊದಲು ಸೆಟ್‍ಗೆ ಹೋದಾಗ ಅನುಷ್ಕಾ ಇನ್ನೂ ಬಂದಿರಲಿಲ್ಲ. ಆಕೆ ವೃತ್ತಿಪರ ನಟಿ ನನಗೆ ನಟನೆ ಬರುವುದಿಲ್ಲ. ನಾನು ಹೇಗೆ ಅವರ ಜೊತೆ ನಟಿಸುವುದು ಎಂದು ಭಯಪಟ್ಟಿದೆ. ನಂತರ ಅನುಷ್ಕಾ ಬಂದಾಗ ನಾನು ನನ್ನ ಭಯವನ್ನು ಹೋಗಿಸಲು ಜೋಕ್ ಮಾಡಬೇಕು ಎಂದುಕೊಂಡೆ. ಆ ದಿನ ಅನುಷ್ಕಾ ಹೀಲ್ಸ್ ಹಾಕಿಕೊಂಡು ಬಂದಿದ್ದರು. ಆ ಹೀಲ್ಸ್ ಧರಿಸಿದ್ದರಿಂದ ಆಕೆ ನನಗಿಂತ ಎತ್ತರವಾಗಿ ಕಾಣುತ್ತಿದ್ದರು. ಅದನ್ನು ಕಂಡ ನಾನು ತಮಾಷೆ ಮಾಡಿದೆ ಎಂದು ಹೇಳಿದ್ದಾರೆ.

ತನ್ನ ಹೀಲ್ಸ್ ಬಗ್ಗೆ ಕಮೆಂಟ್ ಮಾಡಿದ ತಕ್ಷಣ ಅನುಷ್ಕಾ ನನ್ನ ಮೇಲೆ ಗರಂ ಆಗಿದ್ದರು. ನಂತರ ನಾನು ಆ ರೀತಿ ಹೇಳಿದ್ದು, ತಮಾಷೆಗಾಗಿ ಎಂದು ಹೇಳಿದೆ. ಈ ಜೋಕ್ ನನಗೆ ನನ್ನ ಜೀವನದಲ್ಲಿ ವಿಲಕ್ಷಣ ಕ್ಷಣವಾಗಿತ್ತು. ನಾನು ನಿಜವಾಗಿಯೂ ಮೂರ್ಖನಾಗಿದ್ದೆ. ಆಕೆಗೆ ನಟನೆ ಮಾಡುವ ಸಮಯದಲ್ಲಿ ತುಂಬಾ ಆತ್ಮ ವಿಶ್ವಾಸದಲ್ಲಿ ಇರುತ್ತಾಳೆ ಎಂದು ಕೊಹ್ಲಿ ಹೇಳಿದ್ದಾರೆ.

ಅನುಷ್ಕಾ ತಮ್ಮ ಮದುವೆಯನ್ನು ಇಟಲಿಯಲ್ಲಿ ಯಾವ ರೀತಿ ಆಯೋಜನೆ ಮಾಡಿದ್ದರು ಎಂದು ಹೇಳಿರುವ ಕೊಹ್ಲಿ, ನಾವು ಮದುವೆಯಾಗುವ ಜಾಗದ ಬಗ್ಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನುಷ್ಕಾ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು. ಅವರು ಯಾವ ಮಟ್ಟಕ್ಕೆ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದ್ದರು ಎಂದರೆ ನಾವು ಮದುವೆಯಾಗುವ ಜಾಗ ಮದುವೆಗೆ ಬರುವ ವಿಐಪಿಗಳಿಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈಗ ಯಾವುದೇ ಚಿತ್ರದಲ್ಲಿ ನಟನೆ ಮಾಡದೇ ಇರುವ ಅನುಷ್ಕಾ ಕೊನೆಯ ಬಾರಿಗೆ ನಟನೆ ಮಾಡಿದ್ದು, ಅನಂದ್ ಎಲ್ ರಾಯ್ ನಿರ್ದೇಶನ ಝಿರೋ ಚಿತ್ರದಲ್ಲಿ. ಈ ಚಿತ್ರದಲ್ಲಿ ಅನುಷ್ಕಾ ಜೊತೆ ಕತ್ರಿನಾ ಕೈಫ್ ಮತ್ತು ಶಾರೂಖ್ ಖಾನ್ ಅಭಿನಯ ಮಾಡಿದ್ದರು. ಈ ಚಿತ್ರದ ನಂತರ ಅನುಷ್ಕಾ ಮುಂದಿನ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ.

ಈಗ ಪ್ರಸ್ತುತ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದರ ಜತೆಗೆ ಭಾರತ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎನ್ನುವ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ಮೊದಲ ಸ್ಥಾನಕ್ಕೇರಿದ್ದಾರೆ.

Comments are closed.