
ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದೆ. ಕೊಡಗು, ಕರಾವಳಿ ಸೇರಿ ಹಲವೆಡೆ ಭಾರೀ ಮಳೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ ಆಯ್ದ ಭಾಗಗಳಲ್ಲಿ ಮಳೆ ಆಗುತ್ತಿದ್ದು, ಇಂದು ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವ್ಯಕ್ತಿ ಬಲಿ: ಮಲಪ್ರಭಾ ನದಿಗೆ ಬುಧವಾರ 4 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಕಾರಣ ಗುರುವಾರ ವ್ಯಕ್ತಿಯೊಬ್ಬ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ಲದಲ್ಲಿ ನಡೆದಿದೆ. ಜಾಫರ ನಗರದ ಮದರಸಾಬ ಜಂಗ್ಲಿಸಾಬ ಭಾವಾ ಮಕಾಂದಾರ(55) ಮೃತ ವ್ಯಕ್ತಿ.
ಆರೆಂಜ್ ಅಲರ್ಟ್: ಚಿಕ್ಕಮಗಳೂರು, ಕೊಡಗಿನಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಕಿತ್ತಳೆ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ಕರಾವಳಿಯಲ್ಲಿ ಮುಂದಿನ ಮೂರ್‍ನಾಲ್ಕು ದಿನ ಮಳೆ ಮುಂದುವರಿಯಲಿದೆ. ಇನ್ನು ಉತ್ತರ ಕರ್ನಾಟಕದಲ್ಲಿ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಳುಗಿದ ಭಾಗಮಂಡಲ: ಕಳೆದ 3 ದಿನಗಳಿಂದಲೂ ವರುಣನ ಆರ್ಭಟ ಜೋರಾಗಿರುವುದರಿಂದ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಭಾಗಮಂಡಲ ಅಕ್ಷರಶಃ ಮುಳುಗಿದೆ. ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ದಾಖಲೆಯ ಸರಾಸರಿ 10 ಇಂಚು ಮಳೆಯಾಗಿದೆ. ಕಾವೇರಿ ನದಿ ನೀರು ಅಪಾಯಕಾರಿ ಮಟ್ಟ ಮುಟ್ಟುವ ಸಾಧ್ಯತೆ ಇರುವುದರಿಂದ ಕುಶಾಲನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಿಂದ ನದಿಗೆ 15 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ.
ಕೆಆರ್‌ಎಸ್‌ನಲ್ಲಿ ಒಳಹರಿವು ಹೆಚ್ಚಳ: ಕೊಡಗಿನಲ್ಲಿ ವರುಣನ ಆರ್ಭಟ ಜೋರಾಗಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ಕೆಆರ್‌ಎಸ್‌ಗೆ ಬರುತ್ತಿರುವ ಒಳಹರಿವಿನ ಪ್ರಮಾಣ 36,454 ಕ್ಯೂಸೆಕ್ ಇರುವುದರಿಂದ ಜಲಾಶಯದಿಂದ 43 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಅಣೆಕಟ್ಟೆಯ ನೀರಿನ ಮಟ್ಟ ಗರಿಷ್ಠ 124.80 ಅಡಿಯಿದ್ದು, ಇಂದಿನ ಮಟ್ಟವೂ 124.80 ಅಡಿ ಇದೆ.
ಕುಕ್ಕೆ ಸ್ನಾನಘಟ್ಟ ಮುಳುಗಡೆ: ಸುಬ್ರಹ್ಮಣ್ಯ ಪರಿಸರ ಮತ್ತು ಘಾಟಿ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಗುರುವಾರ ಸುಬ್ರಹ್ಮಣ್ಯದ ಸ್ನಾನ ಘಟ್ಟ ಮುಳುಗಡೆಗೊಂಡಿತು. ಬುಧವಾರ ರಾತ್ರಿ ಯಿಂದ ಈ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಅಪರಾಹ್ನದ ಬಳಿಕ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿ ನೆರೆಯೂ ಇಳಿದಿದೆ.
1.85 ಲಕ್ಷ ಕ್ಯುಸೆಕ್ ನೀರು ನದಿಗೆ: ಮಹಾರಾಷ್ಟ್ರದ ಕೊಯ್ನಾ, ಕೃಷ್ಣಾ ಮತ್ತದರ ಉಪನದಿಗಳಾದ ವೇದಗಂಗಾ, ದೂದಗಂಗಾ ಸೇರಿದಂತೆ ರಾಜ್ಯದ ಘಟಪ್ರಭಾ, ಮಲಪ್ರಭಾ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಭಾರೀ ನೀರು ಬರುತ್ತಿದೆ. ಈ ಮಧ್ಯೆ, ಬಸವಸಾಗರ ಜಲಾಶಯದ 18 ಕ್ರಸ್ಟ್‌ಗೇಟ್ ತೆರೆದು ಗುರುವಾರ ಸಂಜೆ 1.85 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಹೀಗಾಗಿ ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪ್ರವಾಹದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ.
ಇನ್ನೂ ಮೂರು ದಿನ ಮಳೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಹಾಗೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಭಾರೀ ಮಳೆ ಸುರಿದಿದೆ. ಕದ್ರಾ ಮತ್ತು ಸೂಪಾ ಹಾಗೂ ಗೇರುಸೊಪ್ಪ ಜಲಾಶಯಗಳಿಂದ ಶರಾವತಿ ನದಿಗೆ ಬಿಡಲಾಗಿದೆ. ಗೇರುಸೊಪ್ಪಾ ಜಲಾಶಯದಿಂದ ನೀರು ಬಿಟ್ಟ ಕಾರಣದಿಂದಾಗಿ ಶರಾವತಿ ನದಿ ತುಂಬಿ ಹರಿಯುತ್ತಿದೆ. ಮೊದಲಿಗೆ ಲಿಂಗನಮಕ್ಕಿಯಿಂದ 11 ಗೇಟ್ ಮೂಲಕ ನೀರು ಬಿಡಲಾಗಿದ್ದು, ಇದು ಗೇರುಸೊಪ್ಪಾಗೆ ಬಂದಿದೆ. ಈ ಜಲಾಶಯವೂ ತುಂಬಿಕೊಂಡ ಕಾರಣ ನೀರು ಬಿಡಲಾಗಿದೆ. ಕೆಲವು ಗ್ರಾಮಗಳ ತೋಟ ಮತ್ತು ಮನೆಯೊಳಗೆ ನೀರು ನುಗ್ಗಿದೆ. ಕೆಲವೆಡೆ ಗಂಜಿಕೇಂದ್ರ ಆರಂಭಿಸಲಾಗಿದೆ.
Comments are closed.