ಮನೋರಂಜನೆ

ಕೆ.ಜಿ.ಎಫ್ ಚಿತ್ರ ನಿರ್ದೇಶಕನ ಮುಂದಿನ ಸಿನಿಮಾ ಬಹಿರಂಗ..?

Pinterest LinkedIn Tumblr


ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್​ಗಾಗಿ ಬಂಡವಾಳವನ್ನು ಹೂಡಲು ಬಾಲಿವುಡ್ ಸೇರಿದಂತೆ ಹಲವು ವುಡ್​ಗಳ​ ನಿರ್ಮಾಪಕರು ಕ್ಯೂನಲ್ಲಿ ನಿಂತಿರುವುದು ಗೊತ್ತಿರುವ ವಿಷಯ. ಅದ್ಭುತ ಮೇಕಿಂಗ್ ಮೂಲಕ ‘ಕೆ.ಜಿ.ಎಫ್’ ಎಂಬ ಚಿತ್ರವನ್ನು ವಿಶ್ವದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹಿರಿಮೆ ನೀಲ್ ಅವರದ್ದು. ಹೀಗಾಗಿಯೇ ನಿರ್ಮಾಪಕರ ದಂಡೇ ಕನ್ನಡ ನಿರ್ದೇಶಕನ ಕಾಲ್​ಶೀಟ್​ಗಾಗಿ ಕಾಯುತ್ತಿದೆ.

ಇನ್ನು ‘ಕೆ.ಜಿ.ಎಫ್ 2’ ಚಿತ್ರದ ಬಳಿಕ ನಾಯಕ ನಟ ಯಶ್, ‘ಕಿರಾತಕ 2’ ಸೇರಿದಂತೆ ಒಂದಷ್ಟು ಬಿಗ್ ಬಜೆಟ್ ಚಿತ್ರಗಳಿಗೆ ಓಕೆ ಅಂದಿದ್ದಾರೆ. ಆದರೆ ಪ್ರಶಾಂತ್ ನೀಲ್ ಅವರ ಮುಂದಿನ ನಡೆಯೇನು ಎಂಬುದು ಮಾತ್ರ ಇನ್ನೂ ಕೂಡ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇದರ ನಡುವೆ ‘ಉಗ್ರಂ’ ನಿರ್ದೇಶಕರು ಟಾಲಿವುಡ್​ನತ್ತ ಮುಖ ಮಾಡಲಿದ್ದಾರೆ ಎಂಬ ಸುದ್ದಿ ಮಹತ್ವ ಪಡೆದುಕೊಂಡಿದೆ.

ತೆಲುಗಿನ ಮೈತ್ರಿ ಮೂವೀಸ್ ಸಂಸ್ಥೆಯು ‘ಕೆ.ಜಿ.ಎಫ್’ ನಿರ್ದೇಶಕನ ಡೇಟ್​ ಪಡೆಯಲು ಯಶಸ್ವಿಯಾಗಿದ್ದು, ಅವರು ನಿರ್ಮಿಸಲಿರುವ ಮುಂದಿನ ಚಿತ್ರದಲ್ಲಿ ಜೂ. ಎನ್​ಟಿಆರ್ ಅಭಿನಯಿಸಲಿದ್ದಾರಂತೆ. ಈಗಾಗಲೇ ನಿರ್ಮಾಪಕರ ಕಡೆಯಿಂದ ಪ್ರಿ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದ್ದು, ಚಾಪ್ಟರ್-2 ಬಳಿಕ ಪ್ರಶಾಂತ್ ನೀಲ್ ಈ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

‘ಉಗ್ರಂ’ ಎಂಬ ಏಟಿಗೆ ಎದಿರೇಟು ಚಿತ್ರ ನೀಡಿದ್ದ ಪ್ರಶಾಂತ್ ಬಳಿಕ ‘ಕೆ.ಜಿ.ಎಫ್’ ಪಕ್ಕಾ ಆ್ಯಕ್ಷನ್ ಚಿತ್ರದ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹೀಗಾಗಿ ಇವರ ಮುಂದಿನ ಸಿನಿಮಾ ಕೂಡ ಮತ್ತೊಂದು ಭರ್ಜರಿ ಆ್ಯಕ್ಷನ್ ಚಿತ್ರವಾಗಿರಲಿದೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿತು. ಆದರೆ ಇದೀಗ ಹೊರಬಿದ್ದ ಸುದ್ದಿ ಪ್ರಕಾರ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಮುಂದಿನ ಚಿತ್ರ ಮ್ಯೂಸಿಕಲ್ ಡ್ಯಾನ್ಸಿಂಗ್ ಲವ್ ಸ್ಟೋರಿ.

ಕುಚಿಪುಡಿ ನೃತ್ಯಗಾರನ ಸುತ್ತ ನಡೆಯುವ ಕಥೆಯೊಂದನ್ನು ಪ್ರಶಾಂತ್ ನೀಲ್ ಹೆಣೆದಿದ್ದು, ಈ ಡ್ಯಾನ್ಸ್​ ಆಧಾರಿತ ಚಿತ್ರಕ್ಕಾಗಿ ಜೂ.ಎನ್​ಟಿಆರ್​ ಅವರ ಡೇಟ್ಸ್​ ಪಡೆಯಲಾಗಿದೆಯಂತೆ. ಈ ಚಿತ್ರ ಕೂಡ ಕೆ.ಜಿ.ಎಫ್ ನಂತೆ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗಲಿದೆ. ಈ ಮೊದಲು ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ‘ಕೆ.ಜಿ.ಎಫ್’ ನಿರ್ದೇಶಕನ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಮಹೇಶ್ ಬಾಬುಗಿಂತ ಜೂ.ಎನ್​ಟಿಆರ್ ಉತ್ತಮ ಡ್ಯಾನ್ಸರ್ ಎನ್ನುವ ಕಾರಣದಿಂದ ಪ್ರಶಾಂತ್ ನೀಲ್ ಮಹೇಶ್ ಬಾಬುರನ್ನು ಕೈಬಿಟ್ಟಿದ್ದರು ಎಂದು ಹೇಳಲಾಗಿದೆ.

ಸದ್ಯಕ್ಕೆ ಪ್ರಶಾಂತ್​ ನೀಲ್​ ‘ಕೆಜಿಎಫ್​-2’ ಸಿನಿಮಾದಲ್ಲಿ ಬ್ಯುಸಿ ಇದ್ದರೆ, ಅತ್ತ ಜೂ. ಎನ್​ಟಿಆರ್ ರಾಜಮೌಳಿಯ​ ‘ಆರ್​ಆರ್​ಆರ್​’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇವೆರಡು ಚಿತ್ರ ಮುಗಿದ ಬಳಿಕವಷ್ಟೇ ‘ಕುಚಿಪುಡಿ’ ಚಿತ್ರವನ್ನು ನೀಲ್ ಕೈಗೆತ್ತಿಕೊಳ್ಳಲಿದ್ದಾರೆ.

Comments are closed.