ಕರ್ನಾಟಕ

ಅಧಿಕಾರಕ್ಕಾಗಿ ಮತ್ತೆ ಬಿಜೆಪಿ ಕದತಟ್ಟಲಿರುವ ಜೆಡಿಎಸ್​?

Pinterest LinkedIn Tumblr


ಬೆಂಗಳೂರು (ಜು.26): ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದ ಜೆಡಿಎಸ್​ಗೆ ಅಸ್ತಿತ್ವ ಕಾಯ್ದುಕೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಾಂಗ್ರೆಸ್​ನೊಂದಿಗಿನ 14 ತಿಂಗಳ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಮುರಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಈಗ ಜೆಡಿಎಸ್​ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಲು ಸಿದ್ಧತೆ ನಡೆಸಿದೆ ಎಂಬ ಸುದ್ದಿ ದಟ್ಟವಾಗಿದೆ.

ಆಶ್ಚರ್ಯ ಆದರೂ ಇದು ಸತ್ಯ ಎಂಬ ಬೆಳವಣಿಗೆ ಜೆಡಿಎಸ್​ನಲ್ಲಿ ನಡೆದಿದೆ. ಸದ್ಯ ಅಧಿಕಾರ ಕಳೆದುಕೊಂಡಿರುವ ಜೆಡಿಎಸ್​ ಶಾಸಕರಲ್ಲಿ ಆಪರೇಷನ್​ ಕಮಲದ ಭಯ ಇನ್ನಿಲ್ಲದಂತೆ ಕಾಡಿದೆ. ಈ ಕುರಿತು ಕುಮಾರಸ್ವಾಮಿಯೊಂದಿಗೆ ಮಾತನಾಡಿರುವ ಶಾಸಕರು, ಆಪರೇಷನ್​ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ನಾವೇ ಅವರ ಜೊತೆ ಕೈ ಜೋಡಿಸೋಣ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಬಿಎಸ್​ ಯಡಿಯೂರಪ್ಪ ಪ್ರಮಾಣವಚನದ ಹಿನ್ನೆಲೆ ರಾಜ್ಯದ ವಿದ್ಯಾಮಾನಗಳ ಕುರಿತ ಚರ್ಚೆಗೆ ಇಂದು ಕುಮಾರಸ್ವಾಮಿ ತಮ್ಮ ಶಾಸಕರನ್ನು ದಿಢೀರ್​ ಸಭೆಗೆ ಆಹ್ವಾನಿಸಿದ್ದರು. ಈ ವೇಳೆ ಈ ರೀತಿಯದ ಸಲಹೆಯೊಂದು ಹಂಗಾಮಿ ಸಿಎಂಗೆ ಶಾಸಕರು ನೀಡಿದ್ದಾರೆ.

ಬಹುಮತವಿಲ್ಲದೇ ಸರ್ಕಾರ ರಚನೆಗೆ ಮುಂದಾಗಿರುವ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರದ ಬಳಿಕ ಜೆಡಿಎಸ್​-ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಮುಂದಾಗುತ್ತಾರೆ. ಈಗಾಗಲೇ ಕೆಲ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಕ್ಷೇತ್ರದ ಕೆಲಸವೂ ಆಗಲ್ಲ. ಈ ಹಿನ್ನೆಲೆ ನಾವು ಅವರಿಗೆ ಬಾಹ್ಯ ಬೆಂಬಲ ನೀಡುವುದು ಒಳಿತು ಎಂಬ ಸಲಹೆಯನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​ – ಜೆಡಿಎಸ್​ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದ್ದ ಅಂತಿಮ ಘಟ್ಟದಲ್ಲಿ ಜೆಡಿಎಸ್​ ಸಚಿವರಾಗಿದ್ದ ಸಾರಾ ಮಹೇಶ್​ ಕೆಕೆ ಗೆಸ್ಟ್​ ಹೌಸ್​ನಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು. ಆದರೆ ಭೇಟಿಯಾಗುವ ವೇಳೆಗೆಲ್ಲಾ ಮಾತುಕತೆಯ ಸಮಯ ಮೀರಿ ಹೋಗಿತ್ತು. ಶಾಸಕರು ರಾಜೀನಾಮೆ ನೀಡಿದ ಬಳಿಕ ಅವರು ಭೇಟಿಯಾಗಿದ್ದರಿಂದ ವ್ಯವಹಾರ ಕುದುರಲಿಲ್ಲ ಎಂದೂ ಹೇಳಲಾಗುತ್ತಿದೆ. ಶಾಸಕರ ರಾಜೀನಾಮೆಗಿಂತ ಕೊಂಚ ಮುಂಚೆ ಮಾತುಕತೆಗೆ ಜೆಡಿಎಸ್​ ಮುಂದಾಗಿದ್ದರೆ ಬಿಜೆಪಿ – ಜೆಡಿಎಸ್​ ನಡುವೆ ಮೈತ್ರಿ ಸಾಧ್ಯವಿತ್ತು ಎಂದು ಜೆಡಿಎಸ್​ ಪಕ್ಷದೊಳಗಿನ ಕೆಲವರು ಅವಲೋಕನ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತವೆ ಬಲ್ಲ ಮೂಲಗಳು.

ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್​ ಬಿಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ನಿರ್ಧಾರಕ್ಕೆ ಬರುತ್ತದೆಯಾ ಅಥವಾ ಕಳೆದೊಂದು ವರ್ಷದಿಂದ ಹೇಳಿಕೊಂಡು ಬಂದ ತತ್ವಕ್ಕೆ ಅಂಟಿಕೊಂಡು ಅಧಿಕಾರದಿಂದ ದೂರವೇ ಉಳಿಯಲಿದೆಯಾ ಎಂಬುದನ್ನು ಕಾದು ನೋಡಬೇಕು. ಆದರೆ ರಾಜಕೀಯ ರಂಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಇತಿಹಾಸ ಪದೇ ಪದೇ ಸಾಬೀತುಪಡಿಸುತ್ತಿದೆ.

Comments are closed.