ಮನೋರಂಜನೆ

ತನಗೆ ಗಿರೀಶ್ ಕಾರ್ನಾಡ್ ಬರೆದ ಪತ್ರವನ್ನು ಹಂಚಿಕೊಂಡು ಸಂತಾಪ ವ್ಯಕ್ತಪಡಿಸಿದ ಪ್ರಕಾಶ್ ರೈ!

Pinterest LinkedIn Tumblr

ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಬಹುಭಾಷ ನಟ ಪ್ರಕಾಶ್ ರಾಜ್ ತಮಗೆ ಗಿರೀಶ್ ಕಾರ್ನಾಡ್ ಅವರು ಬರೆದ ಪತ್ರವನ್ನು ಬಹಿರಂಗಗೊಳಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ಅವರ 50ನೇ ಹುಟ್ಟುಹಬ್ಬಕ್ಕೆ ಗಿರೀಶ್ ಕಾರ್ನಾಡ್ ಅವರು ಪ್ರೀತಿಯಿಂದ ಪತ್ರ ಬರೆದು ಶುಭಕೋರಿದ್ದರು. ಆ ಪತ್ರದ ಪ್ರತಿಯನ್ನು ಇಂದು ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ನೆನೆದು ಕಂಬನಿ ಮಿಡಿದಿದ್ದಾರೆ.

ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ. ನೀವು ಸಮೃದ್ಧವಾದ, ಸೂರ್ತಿದಾಯಕ ಜೀವನವನ್ನು ನಡೆಸಿದ್ದಕ್ಕೆ ಗಿರೀಶ್ ಕಾರ್ನಾಡ್ ಜಿ ನಿಮಗೆ ಧನ್ಯವಾದಗಳು. ನಿಮ್ಮ ಜೊತೆ ನಾನು ಕಳೆದ ಪ್ರತಿ ಕ್ಷಣವೂ ಜೀವಂತಾವಾಗಿದೆ. ನಿಮ್ಮನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನನ್ನ ಜೀವನದಲ್ಲಿ ನಿಮ್ಮ ಆದರ್ಶ ಸದಾ ಪಾಲಿಸುತ್ತೇನೆ ಎಂದು ಬರೆದು ಅವರು ಬರೆದ ಪತ್ರವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.

ಪ್ರೀತಿಯ ಪ್ರಕಾಶ್ ರಾಜ್, ನಿಮಗೆ ಇಂದು ಐವತ್ತು ತುಂಬಿತೇ? ನಂಬಲಾಗುತ್ತಿಲ್ಲ. ಐವತ್ತು ತಲುಪುವುದು ಕಠಿಣ ಮಾತಲ್ಲ ನಿಜ, ಆರೋಗ್ಯವಾಗಿದ್ದರೆ ಯಾರಾದರೂ ಆ ಅಂಕಿಯನ್ನು ಮುಟ್ಟಬಹುದು. ಆದರೆ ನೀವು ಮಾತ್ರ ಈ ಐವತ್ತರಲ್ಲಿ ಎಷ್ಟೇಲ್ಲಾ ಯಶಸ್ಸನ್ನು, ಪ್ರತಿಭೆಯನ್ನು ತುಂಬಿದ್ದೀರಿ!

ನೀವು ದಿನೇದಿನೇ ಬೆಳೆಯುತ್ತ ಭಾರತದುದ್ದಕ್ಕೂ ರೆಂಬೆ-ಕೊಂಬೆಗಳನ್ನು ಚಾಚುತ್ತಿರುವುದನ್ನ ನಿಮ್ಮ ಮಿತ್ರರಾದ ನಾವು ದೂರದಿಂದ ನೋಡಿ ನಲಿದಿದ್ದೇವೆ, ಹೆಮ್ಮೆಯಿಂದ ಬೀಗಿದ್ದೇವೆ. ಹೀಗೆಯೇ ಮತ್ತು ಎತ್ತರ ಬೆಳೆಯುತ್ತಿರಿ, ಬೆಳಗುತ್ತಿರಿ. ಬೆಳಗುತ್ತಲೇ ನೂರನ್ನು ದಾಟಿ ಹೋಗಿರಿ ಎಂದು ಗಿರೀಶ್ ಕಾರ್ನಾಡ್ ಪತ್ರ ಬರೆದು ಶುಭಕೋರಿದ್ದರು.

Comments are closed.