ಮನೋರಂಜನೆ

ಕಟೌಟ್ ನಿಲ್ಲಿಸಿ ವಿಶ್ವ ದಾಖಲೆ ಬರೆದ ಸೂರ್ಯ ಫ್ಯಾನ್ಸ್​: ಶಾಕ್ ನೀಡಿದ ಅಧಿಕಾರಿಗಳು

Pinterest LinkedIn Tumblr


ಕಾಲಿವುಡ್ ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ‘ಎನ್​.ಜಿ.ಕೆ’ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆ ಬೆನ್ನಲ್ಲೇ ತಮ್ಮ ನೆಚ್ಚಿನ ನಾಯಕ ಸೂರ್ಯ ಹೆಸರಿನಲ್ಲಿ ಅಭಿಮಾನಿಗಳು ವಿಶ್ವ ದಾಖಲೆ ಬರೆದಿದ್ದಾರೆ. ಆದರೆ ಈ ಖುಷಿಯಲ್ಲಿ ಕುಣಿದು ಕುಪ್ಪಳಿಸಬೇಕಾದ ಅಭಿಮಾನಿಗಳಿಗೆ ಚೆನ್ನೈ ಮಹಾನಗರ ಪಾಲಿಕೆ ಬಿಗ್ ಶಾಕ್ ನೀಡಿದೆ.

ಅಭಿಮಾನಿಗಳು ‘ನಂದ ಗೋಪಾಲನ್ ಕುಮಾರನ್'(ಎನ್​.ಜಿ.ಕೆ) ಸಂಭ್ರಮಕ್ಕಾಗಿ ಚಿತ್ರಮಂದಿರದ ಮುಂದೆ ನಟ ಸೂರ್ಯನ 215 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದರು. ಇದು ವಿಶ್ವದ ಅತೀ ಎತ್ತರದ ಕಟೌಟ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಒಂದೆಡೆ ಚಿತ್ರ ಬಿಡುಗಡೆ ಖುಷಿ, ಮತ್ತೊಂದೆಡೆ ಕಟೌಟ್​ ದಾಖಲೆಯನ್ನು ಸಂಭ್ರಮಿಸಲು ಅಭಿಮಾನಿಗಳು ರೆಡಿಯಾಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಚೆನ್ನೈ ಪಾಲಿಕೆ ಅಧಿಕಾರಿಗಳು ಕಟೌಟ್​ ಅನ್ನು ತೆರವುಗೊಳಿಸಲು ಸೂಚಿಸಿದ್ದಾರೆ.

ಈ ಬೃಹದಾಕಾರ ಕಟೌಟ್​ ನಿಲ್ಲಿಸಲು ಸೂರ್ಯ ಫ್ಯಾನ್ಸ್​ ಯಾವುದೇ ಪರವಾನಗಿ ಪಡೆದಿರಲಿಲ್ಲ. ಅಲ್ಲದೆ ಇಷ್ಟೊಂದು ದೊಡ್ಡ ಕಟೌಟ್​ ನಿಲ್ಲಿಸುವುದು ಅಪಾಯಕಾರಿ. ಇದರಿಂದ ಅನಾಹುತು ಸಂಭವಿಸಬಹುದು. ಈ ಹಿಂದೆಯೇ ಮದ್ರಾಸ್ ಹೈಕೋರ್ಟ್​ ಇಂತಹ ಕಟೌಟ್​ಗಳ ಮೇಲೆ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಟೌಟ್​ ಅನ್ನು ಕೆಡವಿ ಹಾಕಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಒಂದಷ್ಟು ಹೊತ್ತು ಪ್ರತಿಭಟನೆ ಕೂಡ ಮಾಡಿದರು.

ಈ ದಾಖಲೆಯ ಕಟೌಟ್ ನಿರ್ಮಿಸಲು ಒಂದು ತಿಂಗಳ ಕಾಲ ಕೆಲಸ ಮಾಡಲಾಗಿತ್ತು. ಇದಕ್ಕಾಗಿ ವ್ಯಯಿಸಿದ್ದು ಬರೋಬ್ಬರಿ 6 ಲಕ್ಷ ರೂ. ಅಂತೆ. ಒಟ್ಟಿನಲ್ಲಿ ತಮ್ಮ ಆರಾಧ್ಯದೈವ ಸೂರ್ಯನ ವಿಶ್ವದಾಖಲೆ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಹಿರಿಹಿರಿ ಹಿಗ್ಗಿದರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲಾ ಎಂಬುದೇ ಸೂರ್ಯ ಫ್ಯಾನ್ಸ್​ನ ಬೇಸರ.

Comments are closed.