ದಕ್ಷಿಣ ಭಾರತದ ಕ್ಯೂಟ್ ನಟಿ ಸಾಯಿ ಪಲ್ಲವಿ ಬರೋಬ್ಬರಿ 2 ಕೋಟಿ ರೂ. ಸಂಭಾವನೆಯ ಜಾಹೀರಾತೊಂದನ್ನು ತಿರಸ್ಕರಿಸಿದ್ದರು. ಈ ಸುದ್ದಿ ಭಾರೀ ವೈರಲ್ ಕೂಡ ಆಗಿತ್ತು. ಆದರೆ ಆ ಬಳಿಕ ‘ಪ್ರೇಮಂ’ ನಟಿ ಎಲ್ಲೂ ಕೂಡ ಅದರ ಬಗ್ಗೆ ಮಾತನಾಡಿರಲಿಲ್ಲ. ಇದೀಗ ತನ್ನ ತೀರ್ಮಾನದ ಹಿಂದಿನ ಕಾರಣವನ್ನು ‘ಮಲರ್’ ಬಿಚ್ಚಿಟ್ಟಿದ್ದಾರೆ.
ಈಗಾಗಲೇ ತನ್ನ ಮುದ್ದು ಮುಖದಿಂದಲೇ ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ನಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಸಾಯಿ ಪಲ್ಲವಿಗೆ ಫೇರ್ನೆಸ್ ಕ್ರೀಮ್ ಕಂಪೆನಿವೊಂದು ಜಾಹೀರಾತಿನಲ್ಲಿ ನಟಿಸಲು ಭರ್ಜರಿ ಆಫರ್ ಮುಂದಿಟ್ಟಿದ್ದರು. ಆದರೆ ಕಂಪೆನಿಯ ಆಫರ್ ತಿರಸ್ಕರಿಸಿದ ‘ಫಿದಾ’ ನಟಿ, ಸೌಂದರ್ಯವರ್ಧಕಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.
ಜನರಲ್ಲಿ ಚರ್ಮ ಸೌಂದರ್ಯದ ಬಗ್ಗೆ ತಪ್ಪು ಕಲ್ಪನೆಗಳಿವೆ. ಮೈ ಬಣ್ಣದ ಬಗ್ಗೆ ಯಾರಿಗೂ ಕೀಳರಿಮೆ ಬೇಡ. ನನ್ನ ಬಣ್ಣ ಬಿಳಿ ಎಂದು ಅದನ್ನೇ ಜಾಹೀರಾತಿನಲ್ಲಿ ತೋರಿಸಲಾಗುತ್ತದೆ. ಇದರಿಂದ ಒಂದಷ್ಟು ಮಂದಿಗೆ ಅವರ ಬಣ್ಣದ ಬಗ್ಗೆ ಕೀಳರಿಮೆ ಮೂಡಬಹುದು. ಇದರಿಂದ ವರ್ಣಬೇಧವನ್ನು ನಾವೇ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸಾಯಿ ಪಲ್ಲವಿ ತಿಳಿಸಿದ್ದಾರೆ.
ನನ್ನ ತಂಗಿ ನನ್ನ ಜತೆ ಕನ್ನಡಿ ಮುಂದೆ ನಿಂತಾಗ ಯಾವಾಗಲೂ ತಾನು ಕಪ್ಪಾಗಿದ್ದೇನೆ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದಳು. ಅವಳಿಗೂ ಬೆಳ್ಳಗಾಗಬೇಕೆಂಬ ಆಸೆಯಿತ್ತು. ನಾನು ಹೇಳಿದಂತೆ ಇಷ್ಟವಿಲ್ಲದಿದ್ದರೂ, ಹಣ್ಣು ತರಕಾರಿಗಳನ್ನು ತಿನ್ನುತ್ತಿದ್ದಳು. ಇದೆಲ್ಲವನ್ನು ನೋಡಿ ಬೆಳೆದವಳು ನಾನು. ಇದರಿಂದ ನನಗೆ ತುಂಬಾ ಬೇಸರವಾಗುತ್ತಿತ್ತು. ಇಂತಹ ಕೀಳರಿಮೆಯನ್ನೇ ಬಂಡವಾಳ ಮಾಡಿಕೊಂಡು ಸೌಂದರ್ಯವರ್ಧಕ ಜಾಹೀರಾತುಗಳನ್ನು ಸೃಷ್ಟಿಸುತ್ತಾರೆ. ಇಂತಹ ಜಾಹೀರಾತಿನಿಂದ ನಾನು ಹಣ ಸಂಪಾದಿಸಿ ಏನು ಮಾಡಬೇಕಿದೆ. ನಾನು ತಿನ್ನುವುದು ಮೂರು ಚಪಾತಿ ಅಥವಾ ಅನ್ನ. ಅದಕ್ಕಿಂತ ದೊಡ್ಡ ಅಗತ್ಯತೆ ನನಗಿಲ್ಲ ಎಂದು ಸಾಯಿ ಪಲ್ಲವಿ ತಿಳಿಸಿದರು.
ನಾನು ಯಾವಾಗಲೂ ಸುತ್ತಮುತ್ತ ಇರುವವರನ್ನು ಹೇಗೆ ಸಂತೋಷಪಡಿಸಬೇಕೆಂದು ಯೋಚಿಸುತ್ತಿರುತ್ತೇನೆ. ಭಾರತೀಯರ ಮೈಬಣ್ಣವೇ ಕಂದು. ಅಂತದ್ರಲ್ಲಿ ಅದರ ಬಗ್ಗೆ ಕೀಳರಿಮೆ ಯಾಕೆ. ನಾವು ವಿದೇಶಿಯರ ಹತ್ತಿರ ಹೋಗಿ ನೀವು ಯಾಕೆ ಬೆಳ್ಳಗಿದ್ದೀರಾ ಎಂದು ಕೇಳುವುದಿಲ್ಲ. ಏಕೆಂದರೆ ಅವರು ಬಣ್ಣವೇ ಅದು. ಹೀಗಾಗಿ ಮೈ ಬಣ್ಣ ಎಂಬುದು ಒಂದೊಂದು ಕಡೆ ಒಂದೊಂದು ರೀತಿಯಲ್ಲಿರುತ್ತದೆ. ಅದರ ಬಗ್ಗೆ ಕೀಳರಿಮೆ ಇರಬಾರದು. ತ್ವಚೆಯ ಬಣ್ಣವನ್ನೇ ಮಾರ್ಕೆಟ್ ಮಾಡಿ ಸಿಗುವ ಹಣ ಬೇಡ ಎಂದು ‘ರೌಡಿ ಬೇಬಿ’ ತಿಳಿಸಿದರು.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಾಯಿ ಪಲ್ಲವಿಯ ಹೇಳಿಕೆಗೆ ಇದೀಗ ದೇಶದಾದ್ಯಂತ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿವೆ. ಇತರೆ ಸ್ಟಾರ್ ನಟ/ನಟಿಯರು ಸಹ ಇಂತಹ ಗಿಮಿಕ್ಗಳನ್ನು ಬಿಟ್ಟು ನಮ್ಮತನವನ್ನು ಉಳಿಸಿಕೊಳ್ಳುವಂತಹ ಗಟ್ಟಿ ನಿರ್ಧಾರ ಮಾಡಬೇಕೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸೆಲ್ವರಾಘವನ್ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಎನ್ಜಿಕೆ’ ಎಂಬ ತಮಿಳು ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದು, ಈ ಚಿತ್ರವು ಕಾಲಿವುಡ್ನಲ್ಲಿ ‘ರೌಡಿ ಬೇಬಿ’ ಮತ್ತಷ್ಟು ಹೆಸರು ತಂದು ಕೊಡಲಿದೆ ಎನ್ನಲಾಗುತ್ತಿದೆ.