ಸಿನಿಮಾದಲ್ಲಿನ ಕೆಲ ಪಾತ್ರಗಳು ನಿಜ ಜೀವನಕ್ಕೆ ಸ್ಪೂರ್ತಿಯಾಗುವುದುಂಟು. ಅಂತೆಯೇ ಬಣ್ಣದ ಲೋಕದಲ್ಲಿದ್ದರೂ ನಿಜ ಜೀವನದಲ್ಲೂ ಸ್ಪೂರ್ತಿಯಾದ ನಟಿಯೊಬ್ಬರು ಈಗ ಸಖತ್ ಸುದ್ದಿಯಾಗಿದ್ದಾರೆ. ಬೆಳಿಗ್ಗೆ ಧಾರವಾಹಿಗಳಲ್ಲಿ ಅಭಿನಯಿಸುವ ಈ ನಟಿ ಜೀವನದ ಪ್ರಯಾಣವನ್ನು ಸರಿದೂಗಿಸಲು ರಾತ್ರಿಯಾಗುತ್ತಿದ್ದಂತೆ ಆಟೋದೊಂದಿಗೆ ರಸ್ತೆಗಿಳಿಯುತ್ತಾರೆ.
ಈ ನಟಿಯ ಹೆಸರು ಲಕ್ಷ್ಮಿ. ಮರಾಠಿ ಭಾಷೆಯ ಪ್ರಮುಖ ಧಾರವಾಹಿಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅದರೊಂದಿಗೆ ಜೀವನ ನಿರ್ವಹಣೆಗಾಗಿ ಆಟೋ ಡ್ರೈವರ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಾರೆ. ಅಂದರೆ ಬೆಳಿಗ್ಗೆಲ್ಲಾ ಕ್ಯಾಮೆರಾ ಮುಂದಿದ್ದರೆ, ರಾತ್ರಿ ವೇಳೆ ಸವಾರಿಗಾಗಿ ಗ್ರಾಹಕರನ್ನು ಎದುರು ನೋಡುತ್ತಿರುತ್ತಾರೆ.
ಮರಾಠಿಗರಿಗೆ ಚಿರ ಪರಿಚಿತ ಮುಖವಾಗಿರುವ ಲಕ್ಷ್ಮಿಯನ್ನು ಇದೀಗ ಇಡೀ ಭಾರತಕ್ಕೆ ಪರಿಚಯಿಸಿದ್ದು, ಖ್ಯಾತ ನಟ ಬೊಮ್ಮನ್ ಇರಾನಿ. ಇತ್ತೀಚೆಗೆ ಲಕ್ಷ್ಮಿ ಆಟೋದಲ್ಲಿ ಸವಾರಿ ಹೋಗಿರುವ ವಿಷಯವನ್ನು ‘ತ್ರಿ ಈಡಿಯಟ್ಸ್’ ಚಿತ್ರ ನಟ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾನು ಇಂದು ಸೂಪರ್ ಲೇಡಿಯೊಬ್ಬರನ್ನು ಭೇಟಿಯಾಗಿರುವೆ. ಇವರು ಮರಾಠಿ ಧಾರಾವಾಯಿಗಳಲ್ಲಿ ಅಭಿನಯಿಸುವ ನಟಿ. ಅಷ್ಟೇ ಅಲ್ಲ, ರಾತ್ರಿಯಲ್ಲಿ ಆಟೋ ಓಡಿಸುತ್ತಾರೆ. ಇಂತವರೇ ನಿಜವಾದ ಸ್ಪೂರ್ತಿ. ರಿಯಲ್ ಹೀರೊ. ನೀವು ಕೂಡ ಇವರ ಆಟೋದಲ್ಲಿ ಪ್ರಯಾಣಿಸುವ ಅವಕಾಶ ಪಡೆಯುತ್ತೀರಿ ಎಂದು ಭಾವಿಸುತ್ತೇನೆ. ಲಕ್ಷ್ಮಿ ಅವರ ನಿಜ ಜೀವನದ ಡಬಲ್ ರೋಲ್ ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ಇರಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿದ್ದು, ತೆರೆ ಮಾತ್ರವಲ್ಲದೆ, ನಿಜ ಜೀವನದಲ್ಲೂ ಹಲವರಿಗೆ ಸ್ಪೂರ್ತಿಯಾಗಿರುವ ಲಕ್ಷ್ಮಿ ಅವರಿಗೆ ಹ್ಯಾಟ್ಸ್ ಆಫ್ ತಿಳಿಸಿದ್ದಾರೆ.