ಕರಾವಳಿ

ಕಂದಕಕ್ಕೆ ಬಿದ್ದ ಗ್ಯಾಸ್ ಸಿಲಿಂಡರ್‌ ತುಂಬಿದ ಲಾರಿ : ಸ್ಥಳೀಯರಲ್ಲಿ ಆತಂಕ

Pinterest LinkedIn Tumblr

ಕೊಣಾಜೆ: ಗ್ಯಾಸ್ ಸಿಲಿಂಡರ್‌ಗಳನ್ನು ತುಂಬಿಕೊಂಡಿದ್ದ ಚಲಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸೋರಿಕೆಯಾಗದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಪಜೀರಿನ ಅರ್ಕಾಣದ ಬಳಿ ಇರುವ ಫಯಾಝ್ ಎಂಬವರಿಗೆ ಸೇರಿದ ಎಚ್‍ಪಿ ಎಲ್‍ಪಿಜಿ ಗೋದಾಮಿನ ಬಳಿಯಲ್ಲೇ ಈ ಅಪಘಾತ ಸಂಭವಿಸಿದೆ. ಲಾರಿಯನ್ನು ಗೋದಾಮಿನಿಂದ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಗೋದಾಮಿನ ಆವರಣಗೋಡೆಗೆ ಢಿಕ್ಕಿ ಹೊಡೆದು ಬಳಿಕ ಬೃಹತ್ ಕಂದಕಕ್ಕೆ ಚಲಿಸಿದೆ. ಈ ಸಂದರ್ಭದಲ್ಲಿ ಮರವೊಂದು ಅಡ್ಡ ಸಿಕ್ಕಿದ ಪರಿಣಾಮ ಲಾರಿ ಪಲ್ಟಿಯಾಗುವುದು ತಪ್ಪಿದೆ.

ಗ್ಯಾಸ್ ಸಿಲಿಂಡರ್ ಇದ್ದ ಲಾರಿಯು ಅಪಘಾತಕ್ಕೀಡಾದಾಗ ಸಿಲಿಂಡರ್ ಸೋರಿಕೆಯಾಗಿಲ್ಲ. ಒಂದು ವೇಳೆ ಗ್ಯಾಸ್ ಸೋರಿಕೆಯಾಗಿದ್ದರೆ ಎಲ್ಲಾ ಸಿಲಿಂಡರ್ ಗಳು ಬ್ಲಾಸ್ಟ್ ಆಗಿ ಅರ್ಕಾಣ ಪ್ರದೇಶದಲ್ಲಿಯೇ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಅಲ್ಲದೆ ಗೋದಾಮಿನ ಸಮೀಪ ಲಾರಿ ಅವಘಡ ಸಂಭವಿಸಿದ ಜಾಗದಲ್ಲಿ ಹಲವಾರು ಮನೆಗಳು ಇದ್ದು ಮನೆ ಮಂದಿ ಬೆಳಗ್ಗಿನಿಂದಲೇ ಆತಂಕಗೊಂಡಿದ್ದರು.

ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಗ್ಯಾಸ್ ಸೋರಿಕೆಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಬಳಿಕ ಗ್ಯಾಸ್ ಸಿಲಿಂಡರ್ ಗಳನ್ನು ಕೆಳಗಿಳಿಸಿ ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.

Comments are closed.