ಮನೋರಂಜನೆ

ಯಶ್​ ಕೊಲೆಗೆ ಸಂಚು: ನಾನು ಕುರಿ-ಕೋಳಿಯಲ್ಲ-ರಾಕಿ ಭಾಯ್​​​..!

Pinterest LinkedIn Tumblr


ಕಳೆದ ಕೆಲ ತಿಂಗಳಿನಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನಟ ಯಶ್​ ಹತ್ಯೆಗೆ ಸಂಚು ಸುದ್ದಿ ಕೇವಲ ವದಂತಿಯಷ್ಟೆ. ಇದನ್ನು ಯಾರೂ ನಂಬಬೇಡಿ. ಈ ಕುರಿತಾಗಿ ಸ್ಪಷ್ಟ ಮಾಹಿತಿ ಇದ್ದರೆ ನನಗೆ ತಿಳಿಸಿ ಎಂದು ನಟ ಯಶ್ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

‘ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸುದ್ದಿಯಿಂದ ನನ್ನ ಮನೆಯವರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಕಿರಿಕಿರಿಯಾಗುತ್ತಿದೆ. ಪದೇ ಪದೇ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ನೋಡಿದಾಗ ನನ್ನನ್ನು ಇಷ್ಟಪಡುವವರ ಮೇಲೆ ಬೇರೇ ರೀತಿಯ ಪರಿಣಾಮ ಬೀರುತ್ತದೆ. ತುಂಬಾ ಜನ ಕರೆ ಮಾಡಿ ಕೇಳುತ್ತಾರೆ’ ಎಂದು ಯಶ್​ ಬೇಸರ ವ್ಯಕ್ತಪಡಿಸಿದರು.

‘ಯಾರೂ ಅಷ್ಟು ಸುಲಭವಾಗಿ ನನ್ನನ್ನು ಏನೂ ಮಾಡಲು ಆಗುವುದಿಲ್ಲ. ಮಾಧ್ಯಮಗಳಲ್ಲಿ ನನ್ನದೊಂದು ಮನವಿ. ನನ್ನ ಹತ್ಯೆಗೆ ಸಂಚು ಸುದ್ದಿ ಕುರಿತಂತೆ ನಿಮಗೆ ಯಾರು ಮಾಹಿತಿ ಕೊಡುತ್ತಿದ್ದಾರೆ ಎಂದು ದಯವಿಟ್ಟು ನಮಗೆ ತಿಳಿಸಿ. ಸತ್ಯಾಸತ್ಯತೆಯನ್ನು ಪೊಲೀಸರು ಪತ್ತೆ ಮಾಡುತ್ತಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಈ ವಿಷಯವಾಗಿ ನಾನು ಗೃಹ ಸಚಿವರೊಂದಿಗೂ ಮಾತನಾಡಿದ್ದೇನೆ. ಅವರೂ ಏನೂ ಇಲ್ಲ ಎಂದಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ಕೊಡುತ್ತಿರುವವರು ಸುಳ್ಳು ಮಾಹಿತಿ ಕೊಡುತ್ತಿರಬಹುದು. ನಾನು ಕುರಿ ಕೋಳಿ ಅಲ್ಲ ನನ್ನ ಕೊಲ್ಲೋಕೆ. ಅಂತೆ ಕಂತೆಗಳನ್ನು ಬಿಟ್ಟುಬಿಡಿ’ ಎಂದಿದ್ದಾರೆ.

‘ಈ ಅಂತೆ ಕಂತೆಗಳ ನಡುವೆ ನಮ್ಮ ಸಿನಿ ರಂಗದಲ್ಲಿನವರ ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದೆ. ನಮ್ಮ ಸಿನಿ ರಂಗದಲ್ಲಿ ಆರೋಗ್ಯಕರ ಸ್ಪರ್ಧೆ ಇದೆ. ಯಾರೂ ಅಷ್ಟು ಕೀಳು ಮಟ್ಟದ ಪ್ರವೃತ್ತಿ ಇರುವವರು ನಮ್ಮಲ್ಲಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ ಎರಡು ವರ್ಷಗಳ ಹಿಂದೆ ನನ್ನ ಕಾರಿನ ಮೇಲೆ ಒಮ್ಮೆ ಯಾರೋ ಕಲ್ಲು ಎಸೆದಿದ್ದರು. ಆಗ ಅದನ್ನು ಪೊಲೀಸರ ಗಮನಕ್ಕೆ ತಂದಿದ್ದೆ. ಈ ವಿಷಯವಾಗಿ ಘಟನೆ ನಡೆದ ಕೂಡಲೇ ದೂರು ನೀಡಿದ್ದೆ. ಅದನ್ನು ಬಿಟ್ಟರೆ ನನ್ನೊಂದಿಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಅವರು ವಿವರಿಸಿದ್ದಾರೆ.

Comments are closed.