ಕರ್ನಾಟಕ

ಇಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್​​ ಪೋಲಿಯೋ ಕಾರ್ಯಕ್ರಮ!

Pinterest LinkedIn Tumblr


ಬೆಂಗಳೂರು: ಇಂದು ದೇಶಾದ್ಯಂತ ಪಲ್ಸ್​​ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಷಕರು ತಮ್ಮ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಕ್ಕದ ಲಸಿಕಾ ಕೇಂದ್ರಕ್ಕೆ ಕರೆದೊಯ್ದು ತಪ್ಪದೇ ಲಸಿಕೆ ಹಾಕಿಸಬೇಕು.

ಪೋಲಿಯೋ ನಿರ್ಮೂಲನೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಪಲ್ಸ್​​ ಪೋಲಿಯೋ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಲ್ಸ್​ ಪೋಲಿಯೋ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ಒಂದು ಸುತ್ತು ಮಾತ್ರ ಪೊಲೀಯೋ ಲಸಿಕೆ ಹಾಕಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು 1994 ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೋ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂಡು ಬಂದಿದೆ. ಕಳೆದ 7 ವರ್ಷಗಳಿಂದ ಇಲ್ಲಿಯವರೆಗೆ ಯಾವುದೇ ಪೋಲೀಯೋ ಪ್ರಕರಣಗಳು ವರದಿಯಾಗಿಲ್ಲ ಎನ್ನಲಾಗಿದ್ದು, ಭಾರತ ಸಹ ಪೊಲೀಯೋ ಮುಕ್ತ ರಾಷ್ಟ್ರವಾಗಿದೆ.

ಮಕ್ಕಳಿಗೆ ಪೋಲಿಯೋ ಸೋಂಕು ತಗುಲಿದರೆ ಪಾಶ್ವವಾಯು, ಅಂಗವಿಕಲತೆಯೊಂದಿಗೆ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಪೋಷಕರು ಈ ಮಾರಕ ರೋಗವನ್ನು ತಡೆಗಟ್ಟಲು ತಮ್ಮ ಮಕ್ಕಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು.

ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ. ಡಿಸೆಂಬರ್​ ಮತ್ತು ಫೆಬ್ರವರಿ ತಿಂಗಳಲ್ಲಿ ಒಟ್ಟು ಎರಡು ಹಂತಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಈ ಬಾರಿ ಕಾರಣಾಂತರಗಳಿಂದ ಪಲ್ಸ್​ ಪೋಲಿಯೋ ಕಾರ್ಯಕ್ರಮ ಮುಂದೂಡಲ್ಪಟ್ಟಿತು. ಪಲ್ಸ್​​ ಪೋಲಿಯೋ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗುತ್ತದೆ.

Comments are closed.