ಕರ್ನಾಟಕ

ಭಯೋತ್ಪಾದಕ ಅಜರ್ ಬಿಟ್ಟಿದ್ದು ಯಾರೆಂದು ಮೋದಿಗೆ ಕೇಳಿದ ರಾಹುಲ್!

Pinterest LinkedIn Tumblr


ಹಾವೇರಿ: ಪುಲ್ವಾಮ ದಾಳಿಗೆ ಕಾರಣವಾದ ಜೈಷ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿದ್ದು ಯಾರೆಂದು ಜನತೆಗೆ ತಿಳಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

ಹಾವೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜಮ್ಮು – ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದ ಘಟನೆಗೆ ಬಿಜೆಪಿಯೇ ನೇರ ಹೊಣೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಪುಲ್ವಾಮಾ ದಾಳಿ ಪ್ಲ್ಯಾನ್ ನಡೆಸಿದ್ದು ಜೈಷ್-ಎ-ಮೊಹ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್, ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಹರಣಕಾರರ ಒತ್ತಡಕ್ಕೆ ಮಣಿದು ಈತನನ್ನು ಭಾರತದ ಜೈಲಿನಿಂದ ಆಪ್ಘಾನಿಸ್ಥಾನದ ಕಂದಹಾರ್‌ಗೆ ಕರೆದುಕೊಂಡು ಹೋಗಿದ್ದು ಹಿಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ಅಲ್ಲವೇ ಎಂದು ರಾಹುಲ್ ಪ್ರಶ್ನಿಸಿದರು.

ಹೋದಲ್ಲಿ ಬಂದಲ್ಲಿ ಪುಲ್ವಾಮಾ ದಾಳಿಯ ಕುರಿತು ಪ್ರಸ್ತಾಪಿಸುವ ನರೇಂದ್ರ ಮೋದಿ, ಮಸೂದ್ ಅಜರ್‌ನನ್ನು ಬಿಟ್ಟಿದ್ದು ಯಾರೆಂದೂ ಜನತೆಗೆ ತಿಳಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.

ಮೋದಿ ಸರ್ಕಾರ ಕೇವಲ ಶ್ರೀಮಂತ ಉದ್ಯಮಿಗಳ ಪರವಾಗಿದ್ದು, ಇವರು ರೈತ ಮತ್ತು ಬಡವರ ವಿರೋಧಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಹರಿಹಾಯ್ದರು. ಇದೇ ವೇಳೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ರೈತರಿಗಾಗಿ ಜಾರಿಗೆ ತಂದ ಯೋಜನೆಗಳ ಕುರಿತು ರಾಹುಲ್ ಮಾಹಿತಿ ನೀಡಿದರು.

Comments are closed.