ಮನೋರಂಜನೆ

ಮುಂಬೈ ಸ್ಲಂನ ಹುಡುಗನಾದ ರಣವೀರ್​ ಸಿಂಗ್​..!

Pinterest LinkedIn Tumblr

ಸಿನಿಮಾ: ‘ಗಲ್ಲಿ ಬಾಯ್​’

ನಿರ್ದೇಶಕಿ: ಜೋಯಾ ಅಖ್ತರ್​

ತಾರಾಬಳಗ: ರಣವೀರ್​ ಸಿಂಗ್​, ಅಲಿಯಾ ಭಟ್​, ಸಿದ್ಧಾರ್ಥ್​ ಚರ್ತುವೇದಿ, ವಿಜಯ್​ ರಾಝ್, ವಿಜಯ್​ ವರ್ಮಾ, ಅಮೃತಾ ಸುಭಾಷ್​.

‘ಗಲ್ಲಿ ಬಾಯ್​’ ಸಿನಿಮಾ ನೋಡಿದ ನಂತರ ಯಾರಾದರೂ ಇದರ ಬಗ್ಗೆ ಮಾತನಾಡಿದರೆ ನೆನಪಾಗೋದು ಕೇವಲ ರಣವೀರ್​ ಸಿಂಗ್​, ಅಲಿಯಾ ಭಟ್​ ಅಥವಾ ನಿರ್ದೇಶಕಿ ಜೋಯಾ ಅಲ್ಲ. ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು ಬಹಳ ಕಾಲದವರೆಗೂ ಮನಸ್ಸಿನಲ್ಲಿ ಮನೆ ಮಾಡಿ ಬಿಡುತ್ತವೆ. ಈ ಚಿತ್ರದಲ್ಲಿನ ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವವಿದೆ. ಇದೇ ಈ ಸಿನಿಮಾದ ಯಶಸ್ಸಿನ ವಿಶೇಷ.

ಹೌದು, ಮುಂಬೈನ ಧಾರಾವಿ ಸ್ಲಂನ ಗಲ್ಲಿ ಗಲ್ಲಿಗಳಲ್ಲಿ ರ‍್ಯಾಪ್​ ಹಾಡನ್ನು ಗುನುಗುತ್ತಾ ಓಡಾಡುವ ಯುವಕ ಬಡತನದಲ್ಲೂ ರ‍್ಯಾಪ್ ಸ್ಟಾರ್​ ಆಗಲು ಪಡುವ ಕಷ್ಟ, ಎದುರಿಸುವ ಸವಾಲುಗಳೇ ಈ ಸಿನಿಮಾದ ಜೀವಾಳ. ಜೋಯಾ ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ರನ್ನು ಬಹಳ ವಿಭಿನ್ನವಾಗಿ ತೋರಿಸಿದ್ದಾರೆ. ಜೋಯಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾಗಳಲ್ಲಿ ಇದು ತುಂಬಾ ಚೆನ್ನಾಗಿ ಎನ್ನಬಹುದು.

ರ‍್ಯಾಪ್ ಸ್ಟಾರ್ ಆಗಲು ಕಷ್ಟಪಡುವ ಸ್ಲಂನ ಗಲ್ಲಿ ಬಾಯ್​ ಆಗಿ ರಣವೀರ್​ ಅಭಿನಯ ನಿಜಕ್ಕೂ ಮನ ಮುಟ್ಟುವಂತಿದೆ. ಈ ಸಿನಿಮಾದಲ್ಲಿ ಬೇರೆ ಸಿನಿಮಾಗಳಂತೆ ನಾಯಕಿಗೆ ಯಾವುದೇ ಬಿಲ್ಡಪ್​ ನೀಡಲಾಗಿಲ್ಲ. ಕಮರ್ಷಿಯಲ್​ ಸಿನಿಮಾಗಳಲ್ಲಿ ರಣವೀರ್​ ಸಿಂಗ್​ ನಾಯಕನಾದಾಗ ಬರುವ ಎಂಟ್ರಿಗಾಗಿ ಕಾಯುವ ಪ್ರೇಕ್ಷಕನಿಗೆ ಕೊಂಚ ನಿರಾಶೆಯಾಗಬಹುದು. ಆದರೆ ಸಾಮಾನ್ಯ ಗಲ್ಲಿಯಲ್ಲಿ ಓಡಾಡುವ ಹುಡುಗ ಹೇಗಿರುತ್ತಾನೋ ಹಾಗೆಯೇ ನೈಜವಾಗಿ ರಣವೀರ್​ರನ್ನು ತೋರಿಸಲಾಗಿದೆ.

‘ಪದ್ಮಾವತ್​’ ಸಿನಿಮಾ ಬರುವವರೆಗೂ ರಣವೀರ್​ ಸಿಂಗ್​ರ ಅಭಿನಯದ ಬಗ್ಗೆ ಅಷ್ಟಾಗಿ ಸುದ್ದಿಯಾಗುತ್ತಿರಲಿಲ್ಲ. ಆದರೆ ಖಲ್ಜಿ ಪಾತ್ರದಲ್ಲಿ ರಣವೀರ್​ ಅಭಿನಯ ಅವರಲ್ಲಿ ಅಡಗಿದ್ದ ನಟನ ಪರಿಚಯ ಮಾಡಿಕೊಟ್ಟಿತ್ತು. ಅದರಂತೆ ಈಗ ‘ಗಲ್ಲಿ ಬಾಯ್​’ನಲ್ಲಿ ಮುರಾದ್​ ಪಾತ್ರದಲ್ಲಿ ರಣವೀರ್ ಅಭಿನಯ​ ಒಬ್ಬ ಅತ್ಯುತ್ತಮ ನಟ ಎನ್ನುವುದನ್ನು ಸಾಬೀತು ಮಾಡಿದೆ.

ನಿಜವಾದ ರ‍್ಯಾಪ್ ಗಾಯಕ ಡಿವೈನ್​ ಜೀವನಾಧಾರಿತ ಕತೆಯೇ ಈ ‘ಗಲ್ಲಿ ಬಾಯ್​’. ಈ ಸಿನಿಮಾದಲ್ಲಿ ನಾಯಕಿ ಅಲಿಯಾ ಭಟ್​ ಸಫೀನಾ ಪಾತ್ರವಂತೂ ಪಕ್ಕಾ ಗಂಡುಬೀರಿ. ಅಲಿಯಾ ಹಾಗೂ ರಣವೀರ್​ ಸಿಂಗ್​ ಮುಖಾಮುಖಿಯಾಗುವ ದೃಶ್ಯದಲ್ಲಿ ಡೈಲಾಗ್​ ಇಲ್ಲದೆಯೇ ನಡೆಯುವ ಮೌನ ಸಂಭಾಷಣೆ ಒಂದು ಸುಂದರವಾದ ಪ್ರೇಮ ಕತೆಯ ಬಗ್ಗೆ ಸುಳಿವನ್ನು ನೀಡುತ್ತದೆ.

ವೈದ್ಯಕೀಯ ವಿದ್ಯಾರ್ಥಿ ಹಾಗೂ ಸ್ಲಂನ ಗಲ್ಲಿ ಹುಡುಗನ ನಡುವೆ ನಡೆಯುವ ವಿಭಿನ್ನ ಹಾಗೂ ಸುಂದರವಾದ ಪ್ರೇಮ ಕತೆ. ಇದರ ನಡುವೆ ಬಂದು ಹೋಗುವ ಹೈಫೈ ಸೊಸೈಟಿಯ ಮತ್ತೊಂದು ಪಾತ್ರ ಕಲ್ಕಿ. ಕಿತ್ತು ತಿನ್ನುವ ಬಡತನ, ತುತ್ತಿನ ಬುತ್ತಿ ತುಂಬಿಕೊಳ್ಳಲು ಮೊದಲ ಆದ್ಯತೆ ನೀಡುವ ಕುಟುಂಬದ ಜತೆಗೆ ಗಲ್ಲಿ ಹುಡುಗನಾಗಿ ರಣವೀರ್​​ ಯಾವ ರೀತಿ ರ‍್ಯಾಪ್ ಸ್ಟಾರ್ ಕಸನ್ನು ಸಾಕಾರಗೊಳಿಸಿಕೊಳ್ಳುತ್ತಾನೆ ಎನ್ನುವುದನ್ನು ಮನ ಮುಟ್ಟುವಂತೆ ಚಿತ್ರೀಕರಿಸಲಾಗಿದೆ.

ಉಳಿದಂತೆ ಸಿನಿಮಾದಲ್ಲಿ ಬರುವ ಎಂ.ಸಿ. ಶೇರ್​, ಮೊಯೀನ್​ ಪಾತ್ರಗಳೂ ಸಹ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಉಳಿದಂತೆ ಸಿನಿಮಾದಲ್ಲಿನ ಹಾಡುಗಳು ಹಾಗೂ ರ‍್ಯಾಪ್ ಎಲ್ಲೂ ಬೇಸರ ತರಿಸುವುದಿಲ್ಲ. ಚಿತ್ರದಲ್ಲಿ ಹಾಡುಗಳು ಬರುವ ಪ್ರತಿಯೊಂದು ಸನ್ನಿವೇಶಕ್ಕೂ ಹಾಡಿನ ಸಾಹಿತ್ಯಕ್ಕೂ ಹೇಳಿ ಮಾಡಿಸಿದಂತಿದೆ. ಸಂಗೀತ ಈ ಸಿನಿಮಾ ಮತ್ತೊಂದು ಪ್ಲಸ್​ ಪಾಯಿಂಟ್​ ಎಂದರೆ ತಪ್ಪಾಗಲಾರದು.

ಸದಾ ಕ್ರೇಜಿ ಹಾಗೂ ಬಿಚ್ಚು ಮಾತಿನ ಬಿಂದಾಸ್​ ರಣವೀರ್​ ಸಿಂಗ್​ರನ್ನು ಇಷ್ಟಪಡುವವರಿಗೆ ಮಾತ್ರ ಈ ಸಿನಿಮಾ ಎಂದು ಕುಳಿತರೆ, ಒಂದು ಒಳ್ಳೆಯ ಸಿನಿಮಾವನ್ನು ಮಿಸ್​ ಮಾಡಿಕೊಳ್ಳುವುದಂತೂ ಖಂಡಿತ.

Comments are closed.