ರಾಷ್ಟ್ರೀಯ

ಜೈಶ್​-ಎ-ಮೊಹಮ್ಮದ್​ ಭಾರತದಲ್ಲಿ ನಡೆಸಿದ ಕೆಲ ಭೀಕರ ದಾಳಿಗಳು

Pinterest LinkedIn Tumblr


ಜೈಶ್​-ಎ-ಮೊಹಮ್ಮದ್​ ಅಥವಾ ಜೆಇಎಂ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾಗಿದೆ. ಇದರ ಮುಖ್ಯ ಧ್ಯೇಯ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವುದು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವುದು. 2000ದಿಂದ ಅಸ್ತಿತ್ವಕ್ಕೆ ಬಂದ ಈ ಉಗ್ರ ಸಂಘಟನೆ ಈವರೆಗೂ ಜಮು-ಕಾಶ್ಮೀರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ದಾಳಿ ನಡೆಸಿದೆ. ಭಾರತದ ಹೆಬ್ಬಾಗಿಲಾಗಿರುವ ಕಾಶ್ಮೀರದಲ್ಲಿ ಮುಸ್ಲಿಮರು ವಿಮೋಚನೆ ಹೊಂದಬೇಕು ಎಂಬುದು ಈ ಸಂಘಟನೆಯ ವಾದ. ಹೀಗೆ ವಿಮೋಚನೆ ದೊರೆತ ನಂತರ ತನ್ನ ಸ್ವಂತ ಸೇನೆಯನ್ನು ಹೊಂದಿ ದೇಶದ ಇತರೆ ಭಾಗಗಳಲ್ಲಿ ಜಿಹಾದ್​ (ಯುದ್ಧ) ಸಾರುವುದು ಈ ಸಂಘಟನೆಯ ಉದ್ದೇಶವಾಗಿದೆ.

ದೇಶದಲ್ಲಿ ಈವರೆಗೂ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ಹಲವು ಪೈಶಾಚಿಕ ಕೃತ್ಯಗಳನ್ನು ಎಸಗಿ, ನೂರಾರು ಅಮಾಯಕ ಜನರನ್ನು ಬಲಿ ಪಡೆದಿದೆ. 2001- ಭಾರತದ ಸಂಸತ್​ ಭವನದ ಮೇಲೆ ದಾಳಿ, 2016 ಸೆಪ್ಟೆಂಬರ್​ ಪಠಾಣ್​ಕೋಟ್​ ಮೇಲೆ ದಾಳಿ ಹಾಗೂ 2016 ಉರಿ ದಾಳಿ ಸೇರಿ ಈವರೆಗೂ ದೇಶದಲ್ಲಿ ಹಲವು ಪೈಶಾಚಿಕ ದಾಳಿಯನ್ನು ಈ ಉಗ್ರ ಸಂಘಟನೆ ನಡೆಸಿದೆ.

ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆ ತಾಲಿಬಾನ್​ ನೊಂದಿಗೆ ಹೆಚ್ಚು ನಿಕಟ ಸಂಪರ್ಕ ಹೊಂದಿದೆ. ಅಘ್ಘಾನಿಸ್ತಾನದಲ್ಲಿ ಅಲ್​ ಖೈದಾ ಜೊತೆಗೂ ಸಂಪರ್ಕ ಹೊಂದಿದೆ.

2002ರಲ್ಲಿ ಪಾಕಿಸ್ತಾನ ಈ ಉಗ್ರ ಸಂಘಟನೆಯನ್ನು ನಿಷೇಧಿಸಿತ್ತು. ಆದರೂ ಬೇರೆಯ ಹೆಸರಿನಲ್ಲಿ ಎಲ್ಲ ಸವಲತ್ತನ್ನು ಸರ್ಕಾರದಿಂದ ಒದಗಿಸಲಾಗಿತ್ತು ಎಂದು ಹಲವು ವರದಿಗಳು ಹೇಳಿವೆ.

ಲಷ್ಕರ್​-ಎ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಸೇರಿ ಜೆಎಎಂ ಭಾರತದ ಸಂಸತ್​ ಭವನದ ಮೇಲೆ 2001ರ ಡಿಸೆಂಬರ್​ ಬಾಂಬ್​ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಐದು ಮಂದಿ ದೆಹಲಿ ಪೊಲೀಸ್ ಸಿಬ್ಬಂದಿ, ಸಿಆರ್​ಪಿಎಫ್​ ಓರ್ವ ಮಹಿಳಾ ಸಿಬ್ಬಂದಿ, ಸಂಸತ್​ ಭವನದ ಇಬ್ಬರು ಸಿಬ್ಬಂದಿ ಹಾಗೂ ಓರ್ವ ಪತ್ರಕರ್ತ ಸೇರಿ ಒಂಭತ್ತು ಮಂದಿ ಬಲಿಯಾಗಿದ್ದರು. ದಾಳಿ ವೇಳೆ ಐವರು ಉಗ್ರರನ್ನು ಸದೆಬಡಿಯಲಾಗಿತ್ತು.

2016ರಂದು ಇದೇ ಉಗ್ರ ಸಂಘಟನೆ ಪಠಾಣ್​ಕೋಟ್​ ಸೈನಿಕರ ಏರ್​ಬೇಸ್​ ಲಾಂಚ್​ ಪ್ಯಾಡ್ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಸ್ಥಳಕ್ಕೆ ಭೇಟಿ ನೀಡಿದ್ದ ಒಂದು ವಾರದ ನಂತರ ಈ ದಾಳಿ ನಡೆದಿತ್ತು.

2016ರಂದು ನಡೆದ ಉರಿ ದಾಳಿಯ ಹೊಣೆಯನ್ನು ಇದೇ ಜೈಶ್​-ಎ-ಮೊಹಮ್ಮದ್​ ಸಂಘಟನೆ ಹೊತ್ತುಕೊಂಡಿದೆ. ಉರಿ ದಾಳಿ ಕಳೆದ ಎರಡು ದಶಕಗಳಲ್ಲೇ ನಡೆದ ಅತ್ಯಂತ ಭೀಕರ ದಾಳಿಯಾಗಿತ್ತು. ಈ ಘಟನೆಯಲ್ಲಿ 19 ಮಂದಿ ಸೈನಿಕರು ಅಸುನೀಗಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ಈ ಸಂಘಟನೆ ಇಂದಿನ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ಅಪಹರಣ ಮಾಡಲು 2007ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ರೂಪಿಸಿತ್ತು. ಇವರನ್ನು ಅಪಹರಣ ಮಾಡಿ, ಭಾರತದಲ್ಲಿ ಸೆರೆಮನೆಯಲ್ಲಿರುವ 42 ಉಗ್ರರನ್ನು ಬಿಡಿಸಿಕೊಳ್ಳುವ ಸಂಚು ರೂಪಿಸಿತ್ತು. ಆದರೆ, ಈ ಉಪಾಯ ಇಂಟಲಿಜೆನ್ಸಿಯಿಂದ ವಿಫಲವಾಯಿತು.

Comments are closed.