ಕರಾವಳಿ

ತುಳು ಚಿತ್ರದಲ್ಲಿ ನಟಿಸುವ ನನ್ನ ಕನಸು ನನಸು ಮಾಡಿದ ಹರೀಶ್ ಶೇರಿಗಾರ್ : ಹಿರಿಯ ನಟ ಅನಂತ್‌ನಾಗ್

Pinterest LinkedIn Tumblr

ಮಂಗಳೂರು, ಫೆಬ್ರವರಿ,16: ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗುತ್ತಿರುವ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22 ಕನ್ನಡ ಚಲನಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ” ಇಂಗ್ಲಿಷ್ ” ಹೆಸರಿನ ತುಳು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತುಳು ಚಿತ್ರದಲ್ಲಿ ನಟಿಸಬೇಕೆಂಬ ನನ್ನ ಬಹುದಿನದ ಕನಸು ನನಸಾಗಿದೆ ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.

ಮಾರ್ಚ್ – 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಮೊದಲ ಬಾರಿಗೆ ತುಳು ಸಿನಿಮಾವನ್ನು ನಿರ್‍ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟ ಅನಂತನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಾತ್ರವಲ್ಲದೇ ಮೇರು ನಟ ಅನಂತನಾಗ್ ಅವರು “English” ಚಿತ್ರದ ಮೂಲಕ ತುಳು ಚಿತ್ರವೊಂದರಲ್ಲಿ ಪ್ರಥಮ ಬಾರಿಗೆ ಅಭಿನಯಿಸುತ್ತಿದ್ದಾರೆ.

ಸಿನಿಮಾಕ್ಕೆ ಈಗಾಗಲೇ ದ.ಕ.ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಮಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಇಂದು ಮಂಗಳೂರಿಗೆ ಆಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತುಳು ಚಿತ್ರ ರಂಗದ ಬೆಳವಣಿಗೆ ಗಮನಿಸುತ್ತಿದ್ದ ತಾನು ತುಳು ಚಿತ್ರದಲ್ಲಿ ನಟಿಸುವ ಕನಸು ಕಂಡಿದ್ದೆ. ಇಂಗ್ಲೀಷ್ ಚಿತ್ರದ ಮೂಲಕ ಆ ಕನಸು ನನಸಾಗಿದೆ. ನನ್ನ ಸಹೋದರ ಸಮನಾದ ಹರೀಶ್ ಶೇರಿಗಾರ್ ಅವರು “ಇಂಗ್ಲೀಷ್” ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ತುಳು ಚಿತ್ರದಲ್ಲಿ ನಟಿಸಬೇಕೆಂಬ ನನ್ನ ಬಹುದಿನದ ಕನಸನ್ನು ನನಸು ಮಾಡಿದ್ದಾರೆ ಎಂದು ಅನಂತನಾಗ್ ಅವರು ಹರ್ಷ ವ್ಯಕ್ತಪಡಿಸಿದರು.

English ಚಿತ್ರದಲ್ಲಿಇಂಗ್ಲೀಷ್ ಕಲಿಸುವ ಮೇಷ್ಟ್ರ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಆಂಗ್ಲ ಭಾಷೆ ಜ್ಞಾನ ಅಲ್ಲ, ಅದೊಂದು ಮಾಧ್ಯಮ. ಅದಕ್ಕೆ ಬೇಕಾದಷ್ಟೇ ಮಾನ್ಯತೆ ನೀಡಿ, ನಮ್ಮ ತಾಯಿ ನುಡಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಅವರು ಹೇಳಿದರು.

ಜಗತ್ತಿನಲ್ಲಿ ಎಷ್ಟೇ ಭಾಷೆಗಳು ಪ್ರಚಲಿತದಲ್ಲಿದ್ದರೂ.. ಇಂಗ್ಲೀಷ್ ಭಾಷೆ ಪ್ರಮುಖವಾಗಿ ಕಂಡು ಬರುತ್ತದೆ. ಇಂಗ್ಲೀಷ್ ಭಾಷೆ ಕಲಿತರೆ ಅದರಿಂದ ಉಪಯೋಗವೂ ಇದೆ. ಇಂಗ್ಲೀಷ್ ಕಲಿಯಿರಿ, ಆದರೆ ನಮ್ಮ ಮಾತೃ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಎಂದು ಅನಂತ್ ನಾಗ್ ಹೇಳಿದರು.

ತಮಗೆ ತುಳು ಭಾಷೆಯ ಚಿತ್ರದಲ್ಲಿ ನಟಿಸಲು ಕಷ್ಟವಾಗುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತುಳು ಭಾಷೆಯಲ್ಲಿ ನಟಿಸಲು ನನಗೆ ಕಷ್ಟ ಎಂದು ಅನಿಸಿಲ್ಲ. ಏಕೆಂದರೆ ನಾನು ಸ್ಥಳೀಯನೇ ಅಗಿದ್ದೇನೆ. ನನ್ನ ತಾಯಿ ಬಂಟ್ವಾಳ ಮೂಲದವರು, ನನ್ನ ತಂದೆ ಉತ್ತರ ಕನ್ನಡದವರು, ನಾನು ಎರಡು ವರ್ಷ ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದೆ. ಹಾಗಾಗಿ ತುಳು ನನ್ನ ಪರಿಚಿತ ಭಾಷೆ, ಈಗ ಸ್ವಲ್ಪ ಮರೆತು ಹೋಗಿದೆ. ಆದರೂ ತುಳು ಚಿತ್ರದಲ್ಲಿ ನಟಿಸಲು ನನಗೇನು ತೊಂದರೆಯಾಗಿಲ್ಲ.ಮತ್ತೆ ನಟನೆಗೆ ಭಾಷೆ ಇಲ್ಲ. ಯಾವೂದೇ ಭಾಷೆಯ ಚಿತ್ರದಲ್ಲಿ ನಟಿಸಿದರೂ ನಟನೆ ಒಂದೇ ಆಗಿರುತ್ತದೆ ಎಂದು ಹೇಳಿದರು.

ಚಿತ್ರದ ನಿರ್ಮಾಪರಾದ ಹರೀಶ್ ಶೇರಿಗಾರ್ ಮಾತನಾಡಿ, ನನ್ನ ತಾಯಿನಾಡಿನ ಭಾಷೆಯಲ್ಲಿ ಚಿತ್ರ ಮಾಡಬೇಕೆಂಬ ನನ್ನ ಬಹುದಿನಗಳ ಅಶೆಯಂತೆ ಒಂದು ಉತ್ತಮ ಕಥಾಹಂದರವನ್ನು ಹೊಂದಿರುವ ತುಳು ಚಿತ್ರವನ್ನು ನಿರ್ಮಿಸುತ್ತಿದ್ದೇನೆ.ಹಿರಿಯ ನಟ ಅನಂತ್ ನಾಗ್ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿರುವುದು ನನ್ನ ಸೌಭಾಗ್ಯವೇ ಸರಿ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ. ಚಿತ್ರಕ್ಕೆ ತಮ್ಮೇಲ್ಲರ ಪ್ರೋತ್ಸಾಹ ಅಗತ್ಯವಾಗಿ ಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ, ನಿರ್ಮಾಪಕಿ ಶ್ರೀಮತಿ ಶರ್ಮಿಳಾ ಶೇರಿಗಾರ್, ಚಿತ್ರದ ನಾಯಕ ನಟ ಪೃಥ್ವಿ ಅಂಬರ್, ನಾಯಕಿ ನಟಿ ನವ್ಯಾ ಪೂಜಾರಿ,ಹಿರಿಯ ಕಲಾವಿದ ಭೋಜರಾಜ ವಾಮಂಜೂರು, ಗಾಯತ್ರಿ ಅನಂತ್‌ನಾಗ್, ಹರೀಶ್ ಶೇರಿಗಾರ್ ಅವರ ಸಹೋದರ ಶ್ರೀನಿವಾಸ್ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.

ತಾರಾಗಣ: ಸಿನಿಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಲಿದ್ದಾರೆ. ಸಂಕಲನ: ಮನು ಶೇಡ್‌ಗಾರ್, ಸಂಗೀತ: ಮಣಿಕಾಂತ್ ಕದ್ರಿ, ಸಾಹಿತ್ಯ ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್, ಡಿಸೈನ್ ದೇವಿ ರೈ, ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ತಾರಾಗಣದಲ್ಲಿ ಪೃಥ್ವಿ ಅಂಬರ್, ನವ್ಯ ಪೂಜಾರಿ, ನವೀನ್‌ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಮೊದಲಾದವರು ಇದ್ದಾರೆ.

ಇಂಗ್ಲಿಷ್ ಸಿನಿಮಾದ ಕಥಾ ಸಾರಾಂಶ :

ಹೀರೋ ಮಾಲ್ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹೀರೋಯಿನ್ ತನ್ನ ಗೆಳತಿಯ ಜೊತೆ ಬರುತ್ತಿರುತ್ತಾಳೆ. ಹೀರೋಗೆ ಹೀರೋಯಿನ್ ಅನ್ನು ಕಂಡು ಇಷ್ಟವಾಗುತ್ತದೆ. ಒಂದು ದಿನ ಹೀರೋ ಹೀರೋಯಿನ್ ಬಳಿ ತನ್ನ ಪ್ರೀತಿ ವಿಷಯ ತಿಳಿಸುತ್ತಾನೆ. ಹೀರೋಹಿನ್ ಹೀರೋಗೆ ಇಂಗ್ಲಿಷ್ ಬರುವುದಿಲ್ಲವೆಂದು ತಾನು ಮದುವೆ ಆದರೆ ಇಂಗ್ಲಿಷ್ ಗೊತ್ತಿರುವವನನ್ನು ಮಾತ್ರ ಆಗುವುದೆಂದು ನಾಯಕನನ್ನು ನಿರಾಕರಿಸುತ್ತಾಳೆ. ಅಂದಿನಿಂದ ಹೀರೋ ತನ್ನ ಫ್ರೆಂಡ್ಸ್ ಜೊತೆ ಸೇರಿ ಇಂಗ್ಲಿಷ್ ಕಲಿಯಲು ಶುರು ಮಾಡುತ್ತಾನೆ. ಹೀರೋ ಕಷ್ಟಪಟ್ಟು ಇಂಗ್ಲಿಷ್ ಕಲಿಯುವುದನ್ನು ನೋಡಿ ಹೀರೋಹಿನ್‌ಗೆ ಹೀರೋನ ಮೇಲೆ ಇಷ್ಟವಾಗುತ್ತದೆ. ಇಬ್ಬರ ನಡುವೆ ಫ್ರೆಂಡ್‌ಶಿಪ್ ಶುರುವಾಗುತ್ತದೆ. ನಂತರದಲ್ಲಿ ಫ್ರೆಂಡ್‌ಶಿಪ್ ಪ್ರೀತಿಯಲ್ಲಿ ಬದಲಾಗುತ್ತದೆ. ಹೀರೋಹಿನ್ ತನ್ನ ಪ್ರೀತಿಯನ್ನು ಮನೆಯವರಲ್ಲಿ ತಿಳಿಸುತ್ತಾರೆ. ಆದರೆ ಮನೆಯವರು ಹೀರೋನನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಹೀರೋ ತನ್ನಂತೆಯೇ ಇತರರಿಗೂ ಇಂಗ್ಲಿಷ್ ಕಲಿಸಬೇಕು ಎನ್ನುವ ಉದ್ದೇಶದಿಂದ ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ಅನ್ನು ಪ್ರಾರಂಭಿಸುತ್ತಾನೆ. ಹೀರೋಹಿನ್ ಮನೆಯವರಿಗೆ ಹೀರೋನ ಮೇಲೆ ಹೆಮ್ಮೆಯಾಗುತ್ತದೆ. ಇಬ್ಬರಿಗೂ ಮದುವೆ ಮಾಡಿಸುತ್ತಾರೆ.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

Comments are closed.