ಮನೋರಂಜನೆ

ಹಿಂದಿಯ ಕಪಿಲ್ ಶರ್ಮಾ ಶೋದಲ್ಲಿ ಭಾಗಿಯಾದ ಕನ್ನಡದ ನಟ

Pinterest LinkedIn Tumblr


ಮುಂಬೈ: ದೇಶದ ಕಿರುತೆರೆಯಲ್ಲಿ ತನ್ನ ಮನರಂಜನೆಯ ಮೂಲಕ ಹೆಸರು ಪಡೆದಿರುವ ಕಪಿಲ್ ಶರ್ಮಾ ಶೋದಲ್ಲಿ ಮೊದಲ ಬಾರಿಗೆ ಕನ್ನಡದ ನಟರೊಬ್ಬರು ಭಾಗಿಯಾಗಿದ್ದಾರೆ.

ಕಪಿಲ್ ಶರ್ಮಾ ಶೋದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದು, ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕಪಿಲ್ ಶೋನಲ್ಲಿ ಬಾಲಿವುಡ್ ಸಿನಿಮಾ ಸ್ಟಾರ್ ಗಳಿಂದ ಹಿಡಿದು ಹಲವು ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದಾರೆ. ಇಂತಹ ಶೋನಲ್ಲಿ ಸುದೀಪ್ ಭಾಗವಹಿಸಿದ್ದು, ಕಪಿಲ್ ಅವರ ಶೋನಲ್ಲಿ ನಗು ಸಮೃದ್ಧವಾಗಿದ್ದು, ಅಪರೂಪ ಸಂದರ್ಭ ಎಂಬಂತೆ ಹೆಚ್ಚು ನಕ್ಕಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕಪಿಲ್ ಶರ್ಮಾ, ನವಜೋತ್ ಸಿಂಗ್ ಸಿಧು, ಸುನಿಲ್ ಶೆಟ್ಟಿ ಜೊತೆಯಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಸುದೀಪ್ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಸಿನಿಮಾ ಪ್ರಚಾರಕ್ಕಾಗಿ ಶೋದಲ್ಲಿ ಭಾಗವಹಿಸುತ್ತಾರೆ. ಕೆಲವೊಮ್ಮೆ ಕಾರ್ಯಕ್ರಮದ ಆಯೋಜಕರು ವಿಶೇಷ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ಶೋ ಮಾಡುತ್ತಾರೆ. ಸದ್ಯ ಸುದೀಪ್ ಯಾವ ಸಿನಿಮಾ ಪ್ರಚಾರಕ್ಕಾಗಿ ಶೋಗೆ ತೆರಳಿದ್ದಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.

ಈ ಹಿಂದೆ ಕುಡ್ಲದ ಬೆಡಗಿ ತಮ್ಮ ಹಿಂದಿ ಸಿನಿಮಾ ಮೆಹೆಂಜೋದಾರೋ ಚಿತ್ರದ ಪ್ರಮೋಶನ್ ಗಾಗಿ ಹೃತಿಕ್ ರೋಷನ್ ಜೊತೆ ತೆರಳಿದ್ದರು. ಆದ್ರೆ ಕನ್ನಡದ ಖ್ಯಾತ ನಟರೊಬ್ಬರು ಇದೇ ಮೊದಲ ಬಾರಿಗೆ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ಬಳಿಕ ಎರಡನೇ ಸೀಸನ್ ಆರಂಭಿಸಿರುವ ಕಪಿಲ್ ಎಂದಿನಂತೆ ಸಾರ್ವಜನಿಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸ್ಯ ಕಾರ್ಯಕ್ರಮದ ಕಿರೀಟ್ ಅಂತಾನೇ ಕರೆಸಿಕೊಳ್ಳುವ ಸಚಿವ ನವಜೋತ್ ಸಿಂಗ್ ಸಿಧು ಕೆಲಸದ ಒತ್ತಡದ ನಡುವೆ ಶೋನಲ್ಲಿ ತಮ್ಮ ಸುಂದರ ಶಾಯರಿಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪೈಲ್ವಾನ್ ಮತ್ತು ಸೈರಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸುದೀಪ್, ಹಿಂದಿಯ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್-3 ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಹಿಂದಿಯ ಹಾರರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸುನಿಲ್ ಶೆಟ್ಟಿ ಜೊತೆಗೆ ಮತ್ತೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುವುದು ಕಾರ್ಯಕ್ರಮ ನೋಡಿದಾಗ ತಿಳಿಯಲಿದೆ. ಕೇವಲ ಫೋಟೋ ಹಂಚಿಕೊಂಡಿರುವ ಸುದೀಪ್ ಸಂಚಿಕೆ ಯಾವಾಗ ಪ್ರಸಾರವಾಗಲಿದೆ ಎಂಬುದನ್ನು ತಿಳಿಸಿಲ್ಲ.

Comments are closed.