ಮನೋರಂಜನೆ

ಸೀತಾರಾಮ ಕಲ್ಯಾಣ; ಮಂಡ್ಯದ ಹಳ್ಳಿಗಳಲ್ಲಿ ಟಿಕೆಟ್ ಹಂಚುತ್ತಿದ್ದಾರಾ ಜೆಡಿಎಸ್ ಶಾಸಕರು?

Pinterest LinkedIn Tumblr


ಮಂಡ್ಯ: ಸಕ್ಕರೆನಾಡಿನಲ್ಲಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿದೆ. ಪರಿಣಾಮವಾಗಿ ನಗರದ ಸಂಜಯ್ ಚಿತ್ರ ಮಂದಿರದಿಂದ ಈ ಚಿತ್ರ ಎತ್ತಂಗಡಿಯಾಗಿದೆ. ಪ್ರದರ್ಶನ ಕಾಣುತ್ತಿರುವ ಗುರುಶ್ರೀ ಚಿತ್ರಮಂದಿರದಲ್ಲೂ ಪ್ರೇಕ್ಷಕರಿಂದ ನೀರಸ ಸ್ಪಂದನೆ ಸಿಗುತ್ತಿದೆ. ಚಿತ್ರರಂಗದ ಮೂಲಕ ಮಗನನ್ನು ಮಂಡ್ಯ ಜಿಲ್ಲೆಯ ಜನರಿಗೆ ಪರಿಚಯಿಸಲು ಮುಂದಾಗಿದ್ದ ಮುಖ್ಯಮಂತ್ರಿಗೆ ಇದು ಒಂದು ರೀತಿ ಮುಜಗರ ತಂದಿದೆ‌. ಇದನ್ನು ತಪ್ಪಿಸುವ ಸಲುವಾಗಿ ಮಂಡ್ಯ ‌ಜಿಲ್ಲೆಯಲ್ಲಿ ತನ್ನ ಜೆಡಿಎಸ್ ಶಾಸಕರ ಮೂಲಕ ಚಿತ್ರವನ್ನು ಯಶಸ್ವಿಗೊಳಿಸಲು ಸಿಎಂ ಪ್ಲಾನ್ ಮಾಡಿರೋದಾಗಿ ಆರೋಪ ಕೇಳಿ ಬಂದಿದೆ. ಜಿಲ್ಲೆಯಲ್ಲಿ ನೀರಸ ಪ್ರದರ್ಶನ ಕಾಣ್ತಿರೋ ಚಿತ್ರಕ್ಕೆ 200 ಟಿಕೇಟ್ ಅನ್ನು ಜೆಡಿಎಸ್ ಶಾಸಕರ ಮೂಲಕ ಕ್ಷೇತ್ರದ ಜನರಿಗೆ ಪ್ರತಿ ಗ್ರಾಮದಲ್ಲಿ ಹಂಚಿಸ್ತಿರೋದಾಗಿ ಸ್ಥಳೀಯ ಜನರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಈ ಆಟವನ್ನು ಜಿಲ್ಲೆಯ ಜನರು ಕಂಡಿದ್ದು ಮುಂದೆ ಇದೆಲ್ಲ ನಡಿಯೊಲ್ಲ ಅಂತಿದ್ದಾರೆ‌.

ಕುಮಾರಸ್ವಾಮಿ ಅವರು ತಮ್ಮ ಮಗನ ಮೊದಲ ಚಿತ್ರವಾದ ‘ಜಾಗ್ವಾರ್’ನ ಟೀಸರ್ ಅನ್ನು ಮಂಡ್ಯದಲ್ಲಿ ಬಿಡುಗಡೆಗೊಳಿಸಿದ್ದರು. ಮೈಸೂರಿನಲ್ಲಿ ಸೀತಾರಾಮ ಕಲ್ಯಾಣದ ಟೀಸರ್ ಬಿಡುಗಡೆಗೊಳಿಸಿದರು. ಸಾರ್ವತ್ರಿಕ ಲೋಕಸಭಾ ಚುನಾವಣೆ ಹೊಸ್ತಿಲ್ಲಲ್ಲಿ ಮಗನ ಚಿತ್ರ ಬಿಡುಗಡೆಗೊಳಿಸಿ ಚಿತ್ರದ ಯಶಸ್ಸಿನೊಂದಿಗೆ ಮಗನ ಪರಿಚಯ ಮಾಡುವ ಕನಸಿಟ್ಟುಕೊಂಡಿದ್ದ ಸಿಎಂಗೆ ಮಗನ ಚಿತ್ರ ಮಂಡ್ಯದಲ್ಲಿ ಮಖಾಡೆ ಮಲಗಿದ್ದು ಮುಜುಗರ ತಂದಿದೆ.

ಕುತೂಹಲದ ವಿಷಯವೆಂದರೆ ನಿಖಿಲ್ ಕುಮಾರಸ್ವಾಮಿ ಅವರು ಫೆಬ್ರವರಿ 4, ಸೋಮವಾರದಂದು ಮಂಡ್ಯದಲ್ಲಿ ‘ಸೀತಾರಾಮ ಕಲ್ಯಾಣ’ ಚಿತ್ರದ ಯಶಸ್ವಿ ಪ್ರದರ್ಶನದ ಹೆಸರಲ್ಲಿ ಸಭೆ ಮಾಡಲು ನಿರ್ಧರಿಸಿದ್ದಾರೆ. ಆದರೆ, ಮಂಡ್ಯದಲ್ಲೇ ಈ ಚಿತ್ರಕ್ಕೆ ನಿರೀಕ್ಷಿತ ಯಶಸ್ಸು ಸಿಗದೇ ಇರುವುದು ಅವರಿಗೆ ಚಿಂತೆ ತಂದಿದೆ. ಹೀಗಾಗಿ, ಜಿಲ್ಲೆಯ ಜೆಡಿಎಸ್ ಶಾಸಕರ ಮೂಲಕ ಟಿಕೇಟ್ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಾ ಮಗನ ಚಿತ್ರ ವೀಕ್ಷಣೆ ಭಾಗ್ಯ ಕಲ್ಪಿಸಿದ್ದಾರೆ.

ಆದ್ರೆ, ಸಿನಿಮಾ ಟಿಕೆಟ್ ಹಂಚಲಾಗುತ್ತಿದೆ ಎಂಬ ಈ ಆರೋಪವನ್ನು ಜಿಲ್ಲೆಯ ಮಂಡ್ಯ ಶಾಸಕ ಶ್ರೀನುವಾಸ್ ಮತ್ತು ಜಿ.ಪಂ. ಸದಸ್ಯ ಯೋಗೇಶ್ ಸ್ವಷ್ಟವಾಗಿ ನಿರಾಕರಿಸಿದ್ದಾರೆ. ಇದು ಯಾರೋ ರಾಜಕೀಯ ಧ್ವೇಷಕ್ಕೆ ಮಾಡ್ತಿರೋ ಆರೋಪ ಎಂದು ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ತಮ್ಮ ಮಗನನ್ನು ರಾಜಕಾರಣಕ್ಕೆ ಕರೆತರಲೆಂದೇ ಸಿನಿಮಾ ಹೀರೋ ಮಾಡಲಾಗಿದೆ. ಸೀತಾರಾಮ ಕಲ್ಯಾಣವನ್ನು ನಿಖಿಲ್​ಗೆ ಲೋಕಸಭೆ ಚುನಾವಣೆಯ ಜಂಪಿಂಗ್ ಪ್ಯಾಡ್ ಆಗಿ ಬಳಸಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ತಮ್ಮ ಮಗ ಸದ್ಯಕ್ಕೆ ಚಿತ್ರರಂಗದಲ್ಲಿ ಬೆಳೆಯುವ ಉತ್ಸಾಹ ತೋರುತ್ತಿದ್ದಾರೆ. ತಮ್ಮದು ಹೋರಾಟದ ಕುಟುಂಬದವಾದ್ದರಿಂದ ನಿಖಿಲ್ ರಾಜಕಾರಣಕ್ಕೆ ಬರಬೇಕೆಂದರೆ ನೇರವಾಗಿಯೇ ಬರಬಹುದು. ಹೀಗೆಲ್ಲಾ ಸಿನಿಮಾ ಮೂಲಕ ರಾಜಕಾರಣ ಪ್ರವೇಶಿಸುವ ಅಗತ್ಯವಿಲ್ಲ ಎಂದು ಹೆಚ್​ಡಿಕೆ ಇತ್ತೀಚೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಆದರೆ, ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾಗೆ ಮಂಡ್ಯದಲ್ಲಿ ನೀರಸ ಪ್ರತಿಕ್ರಿಯೆ ಸಿಗುತ್ತಿರುವುದು ಕುಮಾರಸ್ವಾಮಿ ಕುಟುಂಬಕ್ಕೆ ಚಿಂತೆಗೀಡು ಮಾಡಿರುವುದಂತೂ ಹೌದು.

Comments are closed.