ಕರ್ನಾಟಕ

ಕುರುಬರೆಲ್ಲಾ ವಕೀಲಿಕೆ ಓದಲು ಸಾಧ್ಯವಾ? ಅದೇನಿದ್ರೂ ಬ್ರಾಹ್ಮಣರ ಕೆಲಸ ಎಂದಿದ್ದ ಶಾನುಬೋಗ: ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ಕುರುಬರೆಲ್ಲಾ ವಕೀಲಿಕೆ ಓದಲು ಆಗುತ್ತಾ ಎಂದು ತನ್ನ ತಂದೆಗೆ ಊರಿನ ಶಾನುಬೋಗರು ಹೆದರಿಸಿದ್ದರು. ಆದರೆ, ತಾನು ಅದನ್ನು ಮೀರಿ ಹಠ ಹಿಡಿದು ಪಂಚಾಯಿತಿ ಸೇರಿಸಿ ಲಾಯರ್ ಓದಿದೆ. ಅದರಿಂದಾಗಿ ತನಗೆ ಸಿಎಂ ಆಗಲು ಸಾಧ್ಯವಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುತ್ತೂರು ಮಠದ ಭಜನಾ ಮೇಳದಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಾ ಸಿದ್ದರಾಮಯ್ಯ ತಮ್ಮ ಹಳೆಯ ದಿನಗಳನ್ನ ಸ್ಮರಿಸಿಕೊಂಡರು.

“ನಮ್ಮಪ್ಪ ನಮ್ಮೂರಿನ ಶಾನುಬೋಗರ ಮಾತನ್ನು ತಪ್ಪದೇ ಕೇಳುತ್ತಿದ್ದರು. ನಾನು ಲಾಯರ್ ಓದಬೇಕೆಂದಾಗ ಅಪ್ಪ ಆ ಶಾನುಬೋಗರ ಸಲಹೆ ಕೇಳಿದರು. ಹೇ ಕುರುಬರು ಲಾಯರ್ ಓದಲು ಆಗುತ್ತಾ.. ಬೇಡ… ಲಾಯರ್​ಗಿರಿ ಏನಿದ್ರೂ ಬ್ರಾಹ್ಮಣರ ಕೆಲಸ ಎಂದು ಶಾನುಬೋಗರು ನಮ್ಮಪ್ಪನಿಗೆ ಹೇಳಿ ಕಳುಹಿಸಿದರು. ಆ ಮಾತು ಕೇಳಿದ ನಮ್ಮಪ್ಪ ನಾನು ಲಾಯರ್ ಓದೋದು ಬೇಡ ಎಂದಿದ್ದರು. ಲಾಯರ್ ಓದಿಲಿಲಲ್ವೆಂದರೆ ಪಾಲು ಕೊಟ್ಟುಬಿಡು ಎಂದು ಮನೆಯಲ್ಲಿ ಗಲಾಟೆ ಮಾಡಿದೆ. ಊರಿನಲ್ಲಿ ಪಂಚಾಯಿತಿ ಸೇರಿಸಿದ ನಂತರ ಲಾಯರ್ ಓದಲು ಅನುಮತಿ ಸಿಕ್ಕಿತು,” ಎಂದು ಸಿದ್ದರಾಮಯ್ಯ ತಮ್ಮ ಲಾಯರ್ ಓದಿನ ಹಿಂದಿನ ಕಥೆಯನ್ನು ಬಿಚ್ಚಿಟ್ಟರು.

“ಆ ಶಾನುಬೋಗರ ಮಾತು ಕೇಳಿದ್ದರೆ ನಾನು ಸಿಎಂ ಆಗುತ್ತಿದ್ದೆನಾ? ಲಾಯರ್ ಮಾಡಿದ್ದಕ್ಕೆ ನಾನು ಮುಖ್ಯಮಂತ್ರಿಯಾದೆ,” ಎಂದು ಸಿದ್ದರಾಮಯ್ಯ ತಿಳಿಸಿದರು.

“ಈ ಜನ್ಮದಲ್ಲಿ ಹಾಗಾಗಿದ್ದೆ. ಆ ಜನ್ಮದಲ್ಲಿ ಹೀಗಾಗಿದ್ದೆ ಎಂಬ ಕರ್ಮದ ಮಾತುಗಳನ್ನ ನಂಬಲೇಬೇಡಿ. ಅದೊಂದು ದೊಡ್ಡ ಸುಳ್ಳಿನ ಬಂಕಾ. ಪಾಪ ಮಾಡಿದರೆ ಕುರಿ, ಕೋಳಿ, ನಾಯಿ ಆಗುತ್ತಾರೆಂಬುದೆಲ್ಲಾ ಸುಳ್ಳು. ನಾನಂತೂ ಕರ್ಮವನ್ನ ನಂಬೊಲ್ಲ. ನೀವೂ ನಂಬಬೇಡಿ,” ಎಂದು ಜನರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಚಾಮುಂಡೇಶ್ವರಿ ಸೋಲಿನ ಕಹಿ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ಸೋಲಿನ ಕಹಿಯನ್ನು ಸಿದ್ದರಾಮಯ್ಯ ಈ ಸಂದರ್ಭದಲ್ಲೂ ನೆನಪಿಸಿಕೊಂಡು ಬೇಸರಪಟ್ಟರು. “ಜನರಿಗಾಗಿ ಇಷ್ಟೆಲ್ಲಾ ಕೆಲಸ ಮಾಡಿದೆ. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಸೋಲಿಸಿದರು. ಅದೆಲ್ಲೋ ದೂರದ ಬಾದಾಮಿ ಜನರು ನನ್ನ ಕೈಹಿಡಿದು ಗೆಲ್ಲಿಸಿದರು. ಬಹುಶಃ ಇಲ್ಲಿ ವರುಣಾ ಕ್ಷೇತ್ರದಲ್ಲಿ ನಿಂತಿದ್ದರೆ ನೀವೆಲ್ಲಾ ಆಶೀರ್ವಾದ ಮಾಡುತ್ತಿದ್ದಿರಿ” ಎಂದು ಸಿದ್ದರಾಮಯ್ಯ ಭಾವುಕರಾದರು.

ಇದೇ ವೇಳೆ ತಮ್ಮ ಮಗನನ್ನು ಗೆಲ್ಲಿಸಿದ ವರುಣಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದರು. “ನಾನು ಪ್ರತಿ ಬಾರಿಯೂ ಸುತ್ತೂರು ಜಾತ್ರೆಗೆ ಬರುತ್ತೇನೆ. ಇದು ನನ್ನ ವರುಣಾ ಕ್ಷೇತ್ರದಲ್ಲೇ ಇದೆ. ಇಲ್ಲಿ ನನ್ನ ಮಗ ಶಾಸಕನಾಗಿದ್ದಾನೆ. ಇಲ್ಲಿನ ಜನರು ನಾನು ಪಡೆದದ್ದಕ್ಕಿಂತಲೂ ಜಾಸ್ತಿ ಬಹುಮತದಿಂದ ಅವರನನ್ನು ಗೆಲ್ಲಿಸಿದ್ದಾರೆ. ಹೀಗಾಗಿ, ಸುತ್ತೂರು ಮಠದ ಮೇಲೆ ಅಪಾರ ಗೌರವ ಇದೆ. ಹಾಗೂ ವರುಣಾ ಕ್ಷೇತ್ರದ ಜನರಿಗೆ ನಾನು ಚಿರಋಣಿಯಾಗಿದ್ದೇನೆ,” ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರು ವರುಣಾ ಕ್ಷೇತ್ರದಲ್ಲಿ ಪ್ರಚಂಡ ರೀತಿಯಲ್ಲಿ ಗೆಲುವು ಸಾಧಿಸಿದ್ದರು.

Comments are closed.