ಕರ್ನಾಟಕ

‘ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮಂಡ್ಯದ ಜೆಡಿಎಸ್​ ಅಭ್ಯರ್ಥಿ ನಾನೇ’

Pinterest LinkedIn Tumblr


ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕ ರಾಜಕಾರಣ ಗರಿಗೆದರುತ್ತಿದ್ದು, ಟಿಕೇಟ್ ಅಕಾಂಕ್ಷಿಗಳು ಭರ್ಜರಿ ಲಾಭಿ ನಡೆಸಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಹಾಲಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದ ಜೆಡಿಎಸ್​ ಅಭ್ಯರ್ಥಿ ನಾನೇ ಎಂದು ಟಿಕೆಟ್ ಗಾಗಿ ನಾಯಕರ ಬಳಿ ಲಾಭಿ ನಡೆಸಿದ್ದಾರೆ.

ಇನ್ನು ಈ ಬಗ್ಗೆ ಇಂದು [ಶನಿವಾರ] ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿರುವ ಎಲ್.ಆರ್.ಶಿವರಾಮೇಗೌಡ, ‘ನನಗೆ 6 ತಿಂಗಳ ಅಧಿಕಾರ ಸಾಕಾ..? ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮಂಡ್ಯದ ಜೆಡಿಎಸ್​ ಅಭ್ಯರ್ಥಿ ನಾನೇ’ ಎಂದು ಸಂಸದ ಎಲ್.ಆರ್.ಶಿವರಾಮೇಗೌಡ ಘಂಟಾ ಘೋಷವಾಗಿ ಹೇಳಿದರು.

ನನ್ನನ್ನೂ ಸೇರಿ ದೇವೇಗೌಡರ ಮನೆಗೆ ಹೋಗಿದ್ದೋರೆಲ್ಲಾ ಅಧಿಕಾರ ಉಂಡಿದ್ದಾರೆ. ಇನ್ನೊಮ್ಮೆ ಟಿಕೆಟ್ ಕೊಡಿ ಎಂದು ನಾನು ವರಿಷ್ಠರನ್ನ ಕೇಳುತ್ತೇನೆ. ಒಂದು ವೇಳೆ ನಿಖಿಲ್ ಸ್ಪರ್ಧಿಸಿದರೆ ಸೀಟು ಬಿಡಲು ಸಿದ್ಧ ಎಂದರು.

ಇದೇ ವೇಳೆ ಸುಮಲತಾ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಈ ಜಿಲ್ಲೆಯಲ್ಲಿ ಅಂಬರೀಶ್​​ ಅವರನ್ನು ಹೊತ್ತು ಮೆರೆದಾಡಿದ್ದೇವೆ.

ಅಂಬರೀಶ್​​ ಪ್ರಾಣ ಹೋದಾಗ ಮುಖ್ಯಮಂತ್ರಿಗಳೇ ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಅದಕ್ಕಿಂತ ಇನ್ನೇನು ಮಾಡಲು ಸಾಧ್ಯ? ಆದ್ರೀಗ ಸುಮಲತಾ ಅವರ ಸ್ಪರ್ಧೆ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ಮೌನಕ್ಕೆ ಜಾರಿದರು.

ಮಂಡ್ಯ ಯಾರಿಗೆ?
ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ನಾಯಕರಿಗೆ ಕಗ್ಗಂಟಾಗಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡು ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದೆ.

ಆದ್ರೆ, ಇತ್ತ ಮೈತ್ರಿ ಪಕ್ಷ ಜೆಡಿಎಸ್ ಕೂಡ ತನ್ನ ಭದ್ರಕೋಟೆ ಮಂಡ್ಯವನ್ನು ಬಿಟ್ಟುಕೊಡಲು ಮಾತೇ ಇಲ್ಲ ಎನ್ನುತ್ತಿದೆ. ಇದ್ರಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುವುದರ ಬಗ್ಗೆ ಮೈತ್ರಿಯಲ್ಲಿ ಒಮ್ಮತ ಮೂಡುತ್ತಿಲ್ಲ.

Comments are closed.