ರಾಷ್ಟ್ರೀಯ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸವಾಲಾಗಲಿರುವ ಈ ಮೂವರು ಮಹಿಳೆಯರು

Pinterest LinkedIn Tumblr


ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿ ವಿರುದ್ಧದ ಚುನಾವಣೆಯಾಗಿ ರೂಪುಗೊಂಡಿದೆ. ಮೋದಿ ಸರ್ಕಾರದ ವಿರುದ್ಧ ಈಗಾಗಲೇ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿವೆ. ಅದರಲ್ಲಿಯೂ ಈ ಮೂವರು ಮಹಿಳೆಯರು ಬಿಜೆಪಿಗೆ ಅತಿದೊಡ್ಡ ಸಮಸ್ಯೆಯಾಗಿದ್ದಾರೆ. ಈ ಮೂವರು ಮಹಿಳೆಯರು ಎರಡನೇ ಬಾರಿಗೆ ಪ್ರಧಾನಿಯಾಗಲು ಮುಂದಾಗಿರುವ ಮೋದಿ ಕನಸಿಗೆ ವಿಘ್ನ ತಂದೊಡ್ಡಲಿದ್ದಾರೆ ಎನ್ನಲಾಗಿದೆ.

ಪ್ರಿಯಾಂಕ ಗಾಂಧಿ: ನೆಹರು ಕುಟುಂಬದ ಕುಡಿಯಾಗಿರುವ ಪ್ರಿಯಾಂಕ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಬಲಪಡಿಸಲು ರಾಜಕೀಯ ಪ್ರವೇಶ ಮಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಉತ್ತರ ಪ್ರದೇಶದ ಪೂರ್ವ) ಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತನ್ನ ಅಜ್ಜಿ ಇಂದಿರಾ ಗಾಂಧಿ ಅವರನ್ನೇ ಹೋಲುವ 47 ವರ್ಷದ ಪ್ರಿಯಾಂಕ ಗಾಂಧಿ, ಈ ಭಾಗದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಅಲ್ಲದೇ, ಉತ್ತಮ ವಾಕ್ಚತುರ್ಯ ಹೊಂದಿರುವ ಅವರು ಮತದಾರರನ್ನು ಬೇಗ ಸೆಳೆಯುತ್ತಾರೆ. ತನ್ನ ಸಹೋದರ ಹಾಗೂ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಿರೋಧ ಗುಣಗಳನ್ನು ಹೊಂದಿರುವ ಇವರ ರಾಜಕೀಯ ಪ್ರವೇಶಕ್ಕೆ ಈ ಹಿಂದಿನಿಂದಲೂ ಕೂಗು ಕೇಳಿ ಬರುತ್ತಿತ್ತು. ಈಗ ಮೋದಿ ಸೋಲಿಸಲು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದು, ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ.

ಮಮತಾ ಬ್ಯಾನರ್ಜಿ: ಪ್ರಿಯಾಂಕ ಗಾಂಧಿಗಿಂತೆ ಹೆಚ್ಚಿನ ರಾಜಕೀಯ ಅನುಭವ, ವರ್ಚಸ್ಸು ಹೊಂದಿರುವ ಮತ್ತೊಬ್ಬ ಪ್ರಭಾವಿ ನಾಯಕಿ ಮಮತಾ ಬ್ಯಾನರ್ಜಿ. ಎರಡು ಬಾರಿ ರೈಲ್ವೆ ಸಚಿವೆ ಹಾಗೂ ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿರುವ ಅನುಭವ ಹೊಂದಿರುವ 67 ವರ್ಷದ ಮಮತಾ ಪ್ರಧಾನಿ ಹುದ್ದೆ ಆಕಾಂಕ್ಷಿ ಕೂಡ ಹೌದು.

34 ವರ್ಷಗಳ ಕಮ್ಯೂನಿಸ್ಟ್​ ಸರ್ಕಾರದ ಆಡಳಿತದವನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿದರು. ರಾಜಕೀಯ ಕೌಶಲ್ಯ ಹಾಗೂ ಜಾತ್ಯತೀತ ನಾಯಕಿಯಾಗಿರುವ ಅವರು, ಇತ್ತೀಚೆಗಷ್ಟೇ ಕೊಲ್ಕತ್ತದಲ್ಲಿ ಬೃಹತ್​ ಸಮಾವೇಶ ನಡೆಸಿ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ, ಬಿಜೆಪಿಗೆ ದೊಡ್ಡ ಸವಾಲು ಎಸೆದಿದ್ದಾರೆ. ಬಿಜೆಪಿ ವಿರುದ್ಧ ನಾವೆಲ್ಲಾ ಒಗ್ಗೂಡಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು.

ಮಾಯಾವತಿ : ಉತ್ತರ ಪ್ರದೇಶದ ದಲಿತ ನಾಯಕಿಯಾಗಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಹೊಂದಿದವರು. ಈಗಾಗಲೇ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದಾರೆ. ದೇಶದಲ್ಲಿ ಹೊಸತೊಂದು ಕ್ರಾಂತಿಗಿದು ಮುನ್ನುಡಿಯಾಗಿದೆ. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಮೈತ್ರಿ ಇದಾಗಿದ್ದು, ದಮನಿತರ ಪ್ರತಿನಿಧಿಸುವ ಪಕ್ಷಗಳ ಮೈತ್ರಿ ಮಾಡಿಕೊಳ್ಳುವ ಮೂಲಕ ಕೋಮುವಾದಿಗಳ ವಿರುದ್ಧ ನಾವು ಒಂದಾಗಿದ್ದೇವೆ ಎಂದು ಈ ಹಿಂದೆ ತಿಳಿಸಿದ್ದರು.

ದೇಶದಲ್ಲಿ ಅತ್ಯಂತ ಹೆಚ್ಚು ಲೋಕಸಭಾ ಕ್ಷೇತ್ರಗಳಿರುವ ರಾಜ್ಯವಾದ ಉತ್ತರಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಮಾಡಿಕೊಳ್ಳುತ್ತಿರುವುದರಿಂದ ಬಿಜೆಪಿಗೆ ಏನಿಲ್ಲವೆಂದರೂ 25ರಿಂದ 30 ಸ್ಥಾನಗಳು ನಷ್ಟವಾಗುವುದು ಖಚಿತ ಎನ್ನಲಾಗುತ್ತಿದೆ. 2014ರಲ್ಲಿ ಎನ್​ಡಿಎ ಉತ್ತರಪ್ರದೇಶದ 80 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಗೆದ್ದಿತ್ತು. ಇದು ಎನ್​ಡಿಎ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಹಳ ಪ್ರಮುಖ ಅಂಶವಾಗಿತ್ತು. ಈ ಬಾರಿಯೂ ಉತ್ತರಪ್ರದೇಶದ ಗೆಲುವು ಕೇಂದ್ರದಲ್ಲಿ ಯಾರು ಸರ್ಕಾರ ರಚನೆ ಮಾಡಲಿದ್ದಾರೆ ಎಂಬುದಕ್ಕೆ ನಿರ್ಣಾಯಕವಾಗಿರುವುದರಿಂದ ಬಿಜೆಪಿಗೆ ಈ ಮೈತ್ರಿ ಸಂಕಷ್ಟವನ್ನೇ ತಂದಿಟ್ಟಿದೆ ಎನ್ನಲಾಗಿದೆ.

ಎನ್​ಡಿಎ ವಿರುದ್ಧದ ಪಕ್ಷಗಳಲ್ಲಿ ಮಹಿಳಾ ಧ್ವನಿ ಹೆಚ್ಚಿದೆ. ಇವರು ಮತದಾರರ ಮೇಲೆ ಅದರಲ್ಲೂ ಮಹಿಳಾ ಮತದಾರರ ಮೇಲೆ ಹೆಚ್ಚಿನ ಪರಿಣಾಮ ಹೊಂದುವ ಸಾಧ್ಯತೆ ಇದೆ. ಈ ಮೂವರು ಮಹಿಳೆಯರು ಬಿಜೆಪಿಗೆ ಅತಿ ದೊಡ್ಡ ಸವಾಲ್​ ಆಗಲಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಕೂಡ ತಿಳಿಸಿದ್ದರು.

Comments are closed.