ರಾಷ್ಟ್ರೀಯ

ಪಶ್ಚಿಮಬಂಗಾಳದಲ್ಲಿ ಮೋದಿ ಭಾಷಣದ ವೇಳೆ ಕಾಲ್ತುಳಿತ; ಮಾತು ನಿಲ್ಲಿಸಿ ಹೊರಟು ಹೋದ ಪ್ರಧಾನಿ

Pinterest LinkedIn Tumblr


ಥಾಕೂರ್​ನಗರ: ಪಶ್ಚಿಮಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರ್ಯಾಲಿ ಉದ್ದೇಶಿಸಿ ಪ್ರಧಾನಿ ಮೋದಿ ಅವರು ಭಾಷಣ ಮಾಡುವ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 16 ಮಂದಿ ಗಾಯಗೊಂಡಿದ್ದಾರೆ.

ಹಲವು ಮಹಿಳೆಯರು ಮತ್ತು ಮಕ್ಕಳು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ವಾ ಸಮುದಾಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡು ಭಾಷಣ ಮಾಡುತ್ತಿದ್ದರು. ಈ ವೇಳೆ ಸಮಾವೇಶ ನಡೆಯುವ ಸ್ಥಳದಿಂದ ಹೊರಗೆ ನಿಂತಿದ್ದ ನೂರಾರು ಬೆಂಬಲಿಗರು ರಿಂಗ್​ ದಾಟಿ ಒಳಗೆ ಬರಲು ಯತ್ನಿಸಿದರು.
ಜನಜಂಗುಳಿಯಲ್ಲಿ ಮುನ್ನುಗ್ಗುತ್ತಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಾವು ನಿಂತ ಸ್ಥಳದಲ್ಲಿಯೇ ನಿಲ್ಲಬೇಕು ಎಂದು ಕೇಳಿಕೊಂಡರು. ಆದಾಗ್ಯೂ, ಬೆಂಬಲಿಗರು ಕುರ್ಚಿಗಳನ್ನು ಎಸೆಯಲು ಆರಂಭಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಲ್ಲಿ ನೂಕಾಟ, ತಳ್ಳಾಟ, ಗಲಾಟೆ ಆರಂಭವಾಗಿದೆ.

ಸ್ಥಳದಲ್ಲಿ ಗಲಾಟೆ ಆರಂಭವಾಗುತ್ತಿದ್ದಂತೆ ಮೋದಿ ಅವರು ತಮ್ಮ ಭಾಷಣ ನಿಲ್ಲಿಸಿ, ತಾವು ಮತ್ತೊಂದು ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿ ಅಲ್ಲಿಂದ ಹೊರಟುಹೋದರು.

ಘಟನೆಯಲ್ಲಿ ಗಾಯಗೊಂಡ 16 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನೆಲ್ಲಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ಜುಲೈ 16 ರಂದು ಇಲ್ಲಿನ ಪಶ್ಚಿಮ ಮಿಡ್ನಪುರದಲ್ಲಿ ಪ್ರಧಾನಿಯವರು ಪಾಲ್ಗೊಂಡಿದ್ದ ಚುನಾವಣಾ ಸಮಾವೇಶದಲ್ಲಿ ಗಲಾಟೆ ನಡೆದಿತ್ತು. ಆ ವೇಳೆಯೂ ಕೂಡ ಹಲವು ಮಂದಿ ಗಾಯಗೊಂಡಿದ್ದರು.

Comments are closed.