ಮನೋರಂಜನೆ

ಕನ್ನಡ ಚಲನಚಿತ್ರರಂಗದ ಖ್ಯಾತ ಹಿರಿಯ ನಟ ನಟ ಲೋಕನಾಥ್​​ ನಿಧನ: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ !

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ಲೋಕನಾಥ್ ಅವರು ವಿಧಿವಶರಾಗಿದ್ದು, ಅವರಿಗೆ 90 ವರ್ಷ ವಯಸ್ಸಾಗಿತ್ತು.

ರಂಗಭೂಮಿ ಹಾಗೂ ಕನ್ನಡ ಚಲನಚಿತ್ರರಂಗದ ಹಿರಿಯ ನಟ ಸಿ.ಎಚ್. ಲೋಕನಾಥ್ ಅವರು ನಿಧನರಾಗಿದ್ದು, ಲೋಕನಾಥ್ ಅವರು ವಯೋಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ 12.15ಕ್ಕೆ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 650 ಸಿನಿಮಾಗಳು ಮತ್ತು 1ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದ ಲೋಕನಾಥ್ ಅವರು, 1970ರಲ್ಲಿ ತೆರೆಕಂಡಿದ್ದ ಸಂಸ್ಕಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಲೋಕನಾಥ್ ಅವರು ಕೊನೆಯದಾಗಿ ಏಕೆ 56 ಮತ್ತು ಭೀಮಾ ತೀರದಲ್ಲಿ ಎಂಬ ಚಿತ್ರಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಚಿತ್ರರಂಗದಲ್ಲಿ ಅಂಕಲ್ ಎಂದೇ ಖ್ಯಾತಿ ಪಡೆದಿದ್ದ ಲೋಕನಾಥ್ ಅವರು ಶಂಕರ್ ನಾಗ್ ಮತ್ತು ಅನಂತ್ ನಾಗ್ ಅವರ ಮಿಂಚಿನ ಓಟ ಚಿತ್ರದ ಅಂಕಲ್ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು 1972 ರಿಂದ ‘ ನಟರಂಗ’ದ ಪ್ರಮುಖ ನಟನಾಗಿ ‘ಸಮುದಾಯ’ ‘ಸೂತ್ರದಾರ’ ತಂಡಗಳ ಸುಮಾರು 1000 ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಭೂತಯ್ಯನ ಮಗ ಅಯ್ಯು ಸೇರಿದಂತೆ 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಲೋಕನಾಥ್ ಅವರು ಮನೆಮಾತಾಗಿದ್ದರು. ಸೋಮವಾರ ಮಧ್ಯಾಹ್ನ 11 ರಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೋಕನಾಥ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಇಡಲಾಗುತ್ತದೆ. ಈ ಮೂಲಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

2 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Comments are closed.