ಮನೋರಂಜನೆ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬೆಂಗಾಲಿ ಚಿತ್ರ ನಿರ್ಮಾಪಕ ಮೃಣಾಲ್ ಸೇನ್ ನಿಧನ

Pinterest LinkedIn Tumblr


ನವದೆಹಲಿ: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬೆಂಗಾಲಿ ಚಿತ್ರ ನಿರ್ಮಾಪಕ ಮೃಣಾಲ್ ಸೇನ್ ಅವರು ಭಾನುವಾರ ನಿಧನರಾಗಿದ್ದಾರೆ. ಇವರಿಗೆ 95 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಮುಂಜಾನೆ 10.30ರ ಸುಮಾರಿಗೆ ತಮ್ಮ ನಿವಾಸ ಕೋಲ್ಕತಾದ ಭವಾನಿಪೋರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃಣಾಲ್‌ ಸೇನ್‌ ಸಾವಿಗೆ ಸಂತಾಪ ಸೂಚಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಮೃಣಾಲ್ ಸೇನ್ ಅವರ ನಿಧನದಿಂದ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

1923 ಮೇ 14ರಂದು ಬಾಂಗ್ಲಾದೇಶದ ಫರಿದಾಪುರದಲ್ಲಿ ಜನಿಸಿದ್ದ ಮೃಣಾಲ್ ಸೇನ್ ಪ್ರೌಢ ಶಿಕ್ಷಣ ಮುಗಿಸಿದ ನಂತರ ಕೋಲ್ಕತಾಗೆ ಆಗಮಿಸಿ, ಸ್ಕಾಟಿಶ್‌ ಚರ್ಚ್‌ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದರು. ಬಳಿಕ ಕೋಲ್ಕತಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.

‘ಏಕ್ ದಿನ್ ಅಚಾನಕ್’, ‘ಪದಾತಿಕ್’, ‘ಮೃಗಯಾ’, ‘ರಾತ್‌‌ಭೋರ್‌‌’ನಂತಹ ಪ್ರಸಿದ್ಧ ಚಿತ್ರಗಳನ್ನು ನೀಡಿದ್ದ ಸೇನ್ ಅವರಿಗೆ 2003 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಚಲನಚಿತ್ರ ನಿರ್ಮಾಪಕರಾಗಿದ್ದ ಸೇನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಕಾಲೀನರಾದ ಸತ್ಯಜಿತ್ ರೇ ಮತ್ತು ರಿತ್ವಿಕ್ ಘಾಟಕ್ ಅವರೊಂದಿಗೆ ಭಾರತೀಯ ಸಿನಿಮಾದ ಮಹಾನ್ ರಾಯಭಾರಿಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

Comments are closed.