ಮನೋರಂಜನೆ

ರಾಧಿಕಾ ಪಂಡಿತ್​ ಇನ್ನೂ ಕೆಜಿಎಫ್​ ಸಿನಿಮಾ ನೋಡದೆ ಇರುವುದಕ್ಕೆ ಕಾರಣವೇನು ಗೊತ್ತಾ?

Pinterest LinkedIn Tumblr


ದೇಶ-ವಿದೇಶದ ಸಿನಿಮಾಪ್ರೇಮಿಗಳನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್​. ಈಗಾಗಲೇ 100 ಕೋಟಿ ರೂ. ಗಳಿಸಿ 150 ಕೋಟಿ ಕ್ಲಬ್​ ಸೇರಲು ದಾಪುಗಾಲಿಡುತ್ತಿರುವ ಕೆಜಿಎಫ್​ ರಾಕಿಂಗ್​ ಸ್ಟಾರ್​ ಯಶ್​ಗೆ ದೊಡ್ಡ ಬ್ರೇಕ್​ ನೀಡಿದ್ದು ಸುಳ್ಳಲ್ಲ.

ಆದರೆ, ತನ್ನ ಗಂಡನ ಇಮೇಜನ್ನೇ ಬದಲಾಯಿಸಿದ ಕೆಜಿಎಫ್​ ಸಿನಿಮಾವನ್ನು ಯಶ್​ ಅವರ ಪ್ರೀತಿಯ ಮಡದಿ ರಾಧಿಕಾ ಪಂಡಿತ್​ ಇನ್ನೂ ನೋಡಿಲ್ವಂತೆ!. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಯಶ್​, ಈ ತಿಂಗಳ ಆರಂಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ರಾಧಿಕಾ ಇನ್ನೂ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಹೇಳಿದ್ದಾರೆ. ಕೆಜಿಎಫ್​ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಸಾಕಷ್ಟು ಮೆಚ್ಚುಗೆಗಗಳು ಬರುತ್ತಿರುವುದರಿಂದ ಸಿನಿಮಾ ನೋಡಬೇಕೆಂದು ರಾಧಿಕಾ ಕೇಳುತ್ತಲೇ ಇರುತ್ತಾರೆ. ಆದರೆ, ವೈದ್ಯರ ಮಾತಿಗೆ ಬೆಲೆ ಕೊಟ್ಟು ಇನ್ನೂ ಸ್ವಲ್ಪ ಸಮಯ ಆದ ನಂತರ ಆಕೆಗೆ ಸ್ಪೆಷಲ್​ ಆಗಿ ಸಿನಿಮಾ ತೋರಿಸುತ್ತೇನೆ ಎಂದು ಹೇಳಿದ್ದೇನೆ ಎಂದಿದ್ದಾರೆ.

ಕನ್ನಡ ಸಿನಿಮಾ ನೂರು ಕೋಟಿ ಮಾಡುತ್ತದೆ ಅನ್ನೋದು ಕಟ್ಟುಕಥೆ ಅಂತ ಎಲ್ಲ ಹೇಳುತ್ತಿದ್ದರು. ಆ ರೀತಿಯ ಮನೋಭಾವ ಎಲ್ಲರಲ್ಲೂ ಗಾಢವಾಗಿ ಮೂಡಿತ್ತು. ಆದರೆ, ಆ ಮಾತನ್ನು ಸುಳ್ಳು ಮಾಡಿದ್ದೇವೆ. ನಮ್ಮ ಈ ಸಿನಿಮಾ ಕಟ್ಟುಕಥೆಯನ್ನು ನಿಜ ಮಾಡಿದೆ. 100 ಕೋಟಿ ಕಲೆಕ್ಷನ್ ಮಾಡಬೇಕು ಎಂಬ‌ ಕನಸನ್ನು ನಿಜ‌ ಮಾಡಿದೆ. ಚಿತ್ರಮಂದಿರಗಳ ಸಂಖ್ಯೆ ಎಲ್ಲ ಕಡೆ ಡಬಲ್‌ ಆಗಿದೆ. ಈ ಯಶಸ್ಸಿಗೆ ಕಾರಣರಾದ ಎಲ್ಲ ಅಭಿಮಾನಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಕೆಜಿಎಫ್​ಗೆ ಆಸ್ಕರ್​ ಏನೂ ಬೇಕಾಗಿಲ್ಲ. ಅಭಿಮಾನಿಗಳ ಪ್ರೀತಿಯೇ ದೊಡ್ಡ ಪ್ರಶಸ್ತಿ ಎಂದಿದ್ದಾರೆ.

ಕನ್ನಡ ಚಿತ್ರರಂಗ ಬಿಟ್ಟು ಎಲ್ಲೂ ಹೋಗಲ್ಲ ಎಂದ ಯಶ್:

ಈ ಸಿನಿಮಾ ಐದು ಭಾಷೆಯಲ್ಲಿ ಬಂದಿದ್ದರಿಂದ ನಾನು ಬೇರೆ ಭಾಷೆಗೆ ಹೋಗುತ್ತೇನೆ ಎಂದು ಹಲವರು ವದಂತಿ ಹರಡಿಸಿದ್ದರು. ಆದರೆ, ಕನ್ನಡ ಚಿತ್ರರಂಗ ಬಿಟ್ಟು ನಾನು ಎಲ್ಲೂ ಹೋಗಲ್ಲ. ಹಾಗೇನಾದರೂ ಬೇರೆ ಭಾಷೆಗೆ ಹೋಗುವುದಿದ್ದರೆ ಎಂದೋ ಹೋಗುತ್ತಿದ್ದೆ. ಕನ್ನಡದ ಜನ ನನಗೆ ಯಾವ ಸ್ಥಾನ, ಗೌರವ ನೀಡಬೇಕೋ ನೀಡಿದ್ದಾರೆ. ಹಾಗಾಗಿ, ಬೇರೆ ಕಡೆ ಹೋಗೋ ಮಾತೇ ಇಲ್ಲ ಎಂದಿದ್ದಾರೆ ಯಶ್.

ರವಿ ಬಸ್ರೂರು ಸಿನಿಮಾ ಮುಗಿದ ಮೇಲೂ ಮತ್ತೆ ಸ್ಪೆಷಲ್‌ ಸೌಂಡ್ ಎಫೆಕ್ಟ್ ಕೊಟ್ಟು ಸಿನಿಮಾ ರಿಲೀಸ್ ಮಾಡಿದ್ದಾರೆ. ನಾವೆಲ್ಲ ಸಿನಿಮಾ ಮುಗಿಯೋವರೆಗೆ ಕೆಲಸ ಮಾಡಿದರೆ ಅವರು ಇಲ್ಲಿವರೆಗೂ ಕೆಲಸ ಮಾಡುತ್ತಲೇ ಇದ್ದಾರೆ. ಈಗ ಸೌಂಡ್​ ಎಫೆಕ್ಟ್​ ಇನ್ನೂ ಚೆನ್ನಾಗಿ ಮೂಡಿಬಂದಿದೆ. ಮೊದಲಿಗಿಂತ ಪರಿಣಾಮಕಾರಿಯಾಗಿ ಸೌಂಡ್​ ನೀಡಿದ್ದಾರೆ. ಹಾಗಾಗಿ, ಮತ್ತೊಮ್ಮೆ ಸಿನಿಮಾ ನೋಡಲು ಬಂದಿದ್ದೇನೆ. ನೀವು ಕೂಡ ಇನ್ನೊಮ್ಮೆ ಸಿನಿಮಾ ನೋಡಿ ಎಂದು ಯಶ್​ ಹೇಳಿದರು.

Comments are closed.