ಕರ್ನಾಟಕ

ತಪ್ಪು ಮಾಡಿದ್ದೇನೆ, ಯಾವುದೇ ವಿಚಾರಣೆ ಬೇಡ; ನಂಗೆ ಹೆಂಡ್ತಿ, ಮಕ್ಳಿದ್ದಾರೆ ಬಿಟ್ಬಿಡಿ ಸ್ವಾಮಿ ಎಂದ ಎಟಿಎಂ ಹಲ್ಲೆಕೋರ!

Pinterest LinkedIn Tumblr


ಬೆಂಗಳೂರು: ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲೆ ಹಲ್ಲೆ ಪ್ರಕರಣ ಸಂಬಂಧ ಇಂದು ಬೆಂಗಳೂರಿನ 65 ನೇ ಸೆಷನ್ಸ್​ ಕೋರ್ಟ್​​ನಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ಮಧುಕರ ರೆಡ್ಡಿ ನ್ಯಾಯಾಧೀಶರೆದುರು ತಪ್ಪೊಪ್ಪಿಕೊಂಡಿದ್ದಾನೆ.

ಪಶ್ಚಾತಾಪ ಪಡುತ್ತಿರುವ ಆತ, ‘ಜ್ಯೋತಿ ಉದಯ್​ ಮೇಲೆ ಹಲ್ಲೆ ಮಾಡಿದ್ದು ನಾನೇ, ಯಾವುದೇ ವಿಚಾರಣೆ ಬೇಡ. ನನ್ನ ಪರ ಯಾವ ವಕೀಲರು ಬೇಡ. ಹೆಂಡತಿ ಮಕ್ಕಳಿದ್ದಾರೆ, ವಾಪಸ್​ ಮನೆಗೆ ಹೋಗಬೇಕು. ದಯವಿಟ್ಟು ಇಂದೇ ಶಿಕ್ಷೆ ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾನೆ.

ಇದು ಜೀವಾವಧಿ ಶಿಕ್ಷೆ ನೀಡುವಂತಹ ಪ್ರಕರಣ. ತಪ್ಪೊಪ್ಪಿಕೊಂಡ ತಕ್ಷಣ ಶಿಕ್ಷೆ ಕಡಿಮೆ ಆಗಲ್ಲ. ವಕೀಲರ ನೇಮಕ ಬಗ್ಗೆ ಪೊಲೀಸರೊಂದಿಗೆ ಚರ್ಚಿಸಿ ಎಂದು ನ್ಯಾಯಾಲಯವು​ ಆರೋಪಿ ಮಧುಕರ ರೆಡ್ಡಿಗೆ ಸೂಚನೆ ನೀಡಿ, ಪ್ರಕರಣದ ವಿಚಾರಣೆಯನ್ನು ಜನವರಿ 7 ಕ್ಕೆ ಮುಂದೂಡಿದೆ.

ಏನಿದು ಘಟನೆ.?

2013 ರ ನ.19 ರ ಬೆಳಗ್ಗೆ 7.10 ರ ವೇಳೆ ಜ್ಯೋತಿ ಉದಯ್​ ತನ್ನ ಮಗಳ ಬರ್ತ್​ಡೇಗೆ ವಸ್ತು ಖರೀದಿಗಾಗಿ ಕಾರ್ಪೋರೇಷನ್​ ಬಳಿ ಹಣ ಡ್ರಾ ಮಾಡಲು ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಮಧುಕರ ರೆಡ್ಡಿ ಕಾರ್ಪೋರೇಷನ್​ ಎಟಿಎಂ ಬಾಗಿಲು ಮುಚ್ಚಿ ಹಲ್ಲೆ ಮಾಡಿದ್ದ. ನಂತರ ವರ್ಷಗಟ್ಟಲೆ ತಲೆ ಮರೆಸಿಕೊಂಡಿದ್ದ. ಎಸ್​ಜೆ ಪಾರ್ಕ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕಾರ್ಪೋರೇಷನ್​ ಸರ್ಕಲ್​ನಲ್ಲಿ ಈ ಘಟನೆ ನಡೆದಿತ್ತು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಒಳಗಾಗಿತ್ತು. ಫೆಬ್ರವರಿ 5 ರಂಧು ಆಂಧ್ರದ ಮದನಪಲ್ಲಿಯಲ್ಲಿ ಮಧುಕರ ರೆಡ್ಡಿಯನ್ನು ಬಂಧಿಸಲಾಗಿತ್ತು.

ಜ್ಯೋತಿ ಉದಯ್​​ ಸಹ ಕಾರ್ಪೋರೇಷನ್​ ಬ್ಯಾಂಕ್​ ಮಿಷನ್​ ರೋಡ್​ ಅಸಿಸ್ಟೆಂಟ್​ ಮ್ಯಾನೇಜರ್​ ಆಗಿದ್ದರು. ಘಟನೆಯಲ್ಲಿ ಅವರ ಬಲಗೈ ಮತ್ತು ಬಲಗಾಲು ಸ್ವಾಧೀನ ಕಳೆದುಕೊಂಡಿತ್ತು. ಬಿಜಿಎಸ್​ ಆಸ್ಪತ್ರೆಯಲಲ್ಇ 6 ತಿಂಗಳ ಚಿಕಿತ್ಸೆ ನೀಡಿ ನಂತರ ಚೇತರಿಕೆ ಕಂಡಿದ್ದರು. ಬಳಿಕ ಅವರನ್ನು ಆರ್​ಆರ್​ ನಗರ ಕಾರ್ಪೋರೇಷನ್​ ಬ್ಯಾಂಕ್​ಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಬಿಡದಿ ಶಾಖೆಯಲ್ಲಿ ಮ್ಯಾನೇಜರ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಘಟನೆ ನಡೆದ ವೇಳೆ ಪೊಲೀಸರು ಹತ್ತಕ್ಕೂ ಹೆಚ್ಚು ಟೀಂ ಮಾಡಿ ಆರೋಪಿ ಮಧುಕರ ರೆಡ್ಡಿಗಾಗಿ ಹುಡುಕಾಟ ನಡೆಸಿದ್ದರು. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆ ಶೋಧ ನಡೆಸಲಾಗಿತ್ತು. ಅಷ್ಟೇ ಅಲ್ಲದೇ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಆರೋಪಿ ಯಾರಿಗೂ ಸಿಗದಂತೆ ತಲೆ ಮರೆಸಿಕೊಂಡಿದ್ದ.

ಮದನಪಲ್ಲಿ ಪೊಲೀಸರು ಬೇರೆ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿದ್ದರು. ಆ ಆರೋಪಿಗಳು ಜೈಲಿನಲ್ಲಿ ಮಧುಕರ ರೆಡ್ಡಿ ಬಗ್ಗೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸ್​ ಪೇದೆಯೊಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಆನಂತರ ಆರೋಪಿ ಮಧುಕರ ರೆಡ್ಡಿಯನ್ನು ಮದನಪಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಬೆಂಗಳೂರು ಪೊಲೀಸರು ಬಾಡಿ ವಾರೆಂಟ್​ ಮೇಲೆ ಕರೆತಂದಿದ್ದರು.

ಇಂದು ಎಸ್​ಜೆ ಪಾರ್ಕ್​ ಪೊಲೀಸರು ನ್ಯಾಯಾಧೀಶ ರಾಜೇಶ್ವರ ಮುಂದೆ ಹಾಜರುಪಡಿಸಿದ್ದರು. ಆದರೆ ಸರ್ಕಾರಿ ಪರ ವಕೀಲರಿಲ್ಲದ ಕಾರಣ ವಿಚಾರಣೆ ಮುಂದೂಡಲಾಯಿತು.

Comments are closed.