ಪ್ರಶಾಂತ್ ನೀಲ್ ನಿರ್ದೇಶಿಸಿ, ಯಶ್ ನಾಯಕನಾಗಿ ಅಭಿನಯಿಸಿರುವ ಕೆಜಿಎಫ್ ಸಿನಿಮಾ ದೇಶವನ್ನು ದಾಟಿ ಹೊರದೇಶಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಳೆದ ವಾರ ತೆರೆಕಂಡ ಕೆಜಿಎಫ್ 7 ದಿನಗಳಲ್ಲಿ 100 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದ್ದು, ಸದ್ಯದಲ್ಲೇ 150 ಕೋಟಿ ರೂ. ಕ್ಲಬ್ ಸೇರಲಿದೆ ಎನ್ನಲಾಗುತ್ತಿದೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ತೆರೆ ಕಾಣುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಇತಿಹಾಸ ನಿರ್ಮಿಸಿರುವ ಕೆಜಿಎಫ್ ಸಿನಿಮಾ ಬಗ್ಗೆ ರಾಷ್ಟ್ರಮಟ್ಟದಲ್ಲೂ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಶಾರುಖ್ ಖಾನ್ ನಟನೆಯ ಝೀರೋ ಸಿನಿಮಾ ಜೊತೆಗೇ ತೆರೆಗೆ ಬಂದ ಕೆಜಿಎಫ್ ಬಾಲಿವುಡ್ ಸ್ಟಾರ್ ಸಿನಿಮಾವನ್ನು ಹಿಂದಿಕ್ಕಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈವರೆಗೂ 113 ಕೋಟಿ ರೂ. ಅಧಿಕ ಹಣ ಗಳಿಸಿರುವ ಕೆಜಿಎಫ್ ಮೂರ್ನಾಲ್ಕು ದಿನಗಳಲ್ಲಿ 150 ಕೋಟಿ ಕ್ಲಬ್ ಸೇರುವುದು ಪಕ್ಕಾ ಎಂಬುದು ಸಿನಿಮಾ ತಜ್ಞರ ಲೆಕ್ಕಾಚಾರ.
ಬಿಡುಗಡೆಯಾದ 6 ದಿನಗಳಲ್ಲಿ ಹಿಂದಿ ಭಾಷೆಯೊಂದರಲ್ಲೇ ಇದುವರೆಗೂ 21.45 ಕೋಟಿ ರೂ. ಗಳಿಸಿರುವ ಕೆಜಿಎಫ್ ದಾಖಲೆ ನಿರ್ಮಿಸಿದೆ. ಶಾರುಖ್ ಸಿನಿಮಾ ಎದುರಾಳಿಯಾಗಿದ್ದರೂ ಹಿಂದಿ ಭಾಷೆಯಲ್ಲಿ ಕೆಜಿಎಫ್ ಮಾಡಿರುವ ದಾಖಲೆ ಕಡಿಮೆಯೇನಲ್ಲ. ಇನ್ನು ತೆಲುಗು, ತಮಿಳು ಭಾಷೆಯಲ್ಲೂ ಕೆಜಿಎಫ್ ಹವಾ ಜೋರಾಗೇ ಇದೆ. ಇದರ ಜೊತೆಗೆ, ಅಮೆರಿಕದಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹಳ ಭರ್ಜರಿ ಓಪನಿಂಗ್ನಿಂದಲೇ ತೆರೆಗೆ ಬಂದ ಕೆಜಿಎಫ್ ಬೇರೆ ಭಾಷೆಗಳಲ್ಲಿ ಮೊದಲ ದಿನಕ್ಕಿಂತ ಈ ವಾರ ಇನ್ನಷ್ಟು ಹೆಚ್ಚಿನ ಕಲೆಕ್ಷನ್ ಮಾಡುತ್ತಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೆಜಿಎಫ್ ಒಂದು ವಾರದಲ್ಲಿ ಕನ್ನಡ ಭಾಷೆಯಲ್ಲಿ 66.50 ಕೋಟಿ ರೂ. ಗಳಿಸಿದೆ. ಹಿಂದಿ ಭಾಷೆಯಲ್ಲಿ 20 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದೆ. ಕೆಜಿಎಫ್ ಆರೇ ದಿನಗಳಲ್ಲಿ ಒಟ್ಟಾರೆ 92 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಡಿಜಿಟಲ್ ಹಕ್ಕು ಮಾರಾಟದಲ್ಲೂ ದಾಖಲೆ:
ಕೆಜಿಎಫ್ ಸಿನಿಮಾದ ಆನ್ ಲೈನ್ ಪ್ರಸಾರದ ಹಕ್ಕನ್ನು ಚಿತ್ರತಂಡ 18 ಕೋಟಿ ರೂ.ಗೆ ಮಾರಾಟ ಮಾಡಿದೆ ಎನ್ನಲಾಗಿದೆ. ಖ್ಯಾತ ಆನ್ ಲೈನ್ ಶಾಪಿಂಗ್ ತಾಣ ಅಮೇಜಾನ್ ಸಹ ಸಂಸ್ಥೆ ಅಮೆಜಾನ್ ಪ್ರೈಮ್ ‘ಕೆಜಿಎಫ್’ನ ಐದೂ ಭಾಷೆಯ ಚಿತ್ರಗಳನ್ನು 18 ಕೋಟಿ ರೂ. ನೀಡಿ ಖರೀದಿಸಿದೆ ಎನ್ನಲಾಗಿದೆ. ಇನ್ನು, ಕನ್ನಡ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಕಲರ್ಸ್ ಕನ್ನಡ ದಾಖಲೆಯ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಕೆಜಿಎಫ್‌ನ ಹಿಂದಿ ಅವತರಣಿಕೆಯನ್ನು ಸೋನಿ ಚಾನೆಲ್ ಖರೀದಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ವಿಜಯ್ ಕಿರಗಂದೂರ್ ನಿರ್ಮಿಸಿದ್ದ ಕೆಜಿಎಫ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದರು. ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದರು. ಉಳಿದಂತೆ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್, ವಸಿಷ್ಠ ಸಿಂಹ, ಅರ್ಚನಾ ಜೋಯಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
Comments are closed.